ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಕೊನೆಯ ದಿನಾಂಕ ಹತ್ತಿರ ಬರ್ತಿದೆ. ತೆರಿಗೆದಾರರು ಹಣ ಕಟ್ಟಲು ಕೇವಲ ನಾಲ್ಕು ದಿನಗಳು ಬಾಕಿ ಇವೆ. ಈ ಸಮಯದಲ್ಲಿ ಭಾರತದಲ್ಲಿ ಅತಿ ಹೆಚ್ಚು ಆದಾಯ ತೆರಿಗೆ ಕಟ್ಟುವವರು ಯಾರು ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಶ್ರೀಮಂತ ಉದ್ಯಮಿಗಳಾದ ಅಂಬಾನಿ-ಅದಾನಿ ಅಥವಾ ಟಾಟಾ ಇರಬಹುದು ಎಂದುಕೊಳ್ಳುವುದು ಸಹಜ. ಆದ್ರೆ ನಿಮ್ಮ ಊಹೆ ತಪ್ಪು. ಈ ವ್ಯಕ್ತಿ ಭಾರತದಲ್ಲಿ ಅಂಬಾನಿ-ಅದಾನಿಗಿಂತ ಹೆಚ್ಚು ತೆರಿಗೆ ಪಾವತಿಸುತ್ತಾರೆ.
ಕಾರ್ಪೊರೇಟ್ ದಿಗ್ಗಜರಿಗೆ ಹೋಲಿಸಿದರೆ ಇತರ ಹಲವು ವಲಯಗಳು ಹೆಚ್ಚಿನ ತೆರಿಗೆಯನ್ನು ಪಾವತಿಸುತ್ತವೆ. ಆದಾಯ ತೆರಿಗೆ ಇಲಾಖೆಯಿಂದ ಪಡೆದ ಮಾಹಿತಿಯ ಪ್ರಕಾರ 2021-22ರ ಆರ್ಥಿಕ ವರ್ಷದಲ್ಲಿ ನಟ ಅಕ್ಷಯ್ ಕುಮಾರ್ ಗರಿಷ್ಠ ತೆರಿಗೆಯನ್ನು ಪಾವತಿಸಿದ್ದರು. ಕಳೆದ ವರ್ಷ ಅಕ್ಷಯ್ 29.5 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದಾರೆ. ಆ ವರ್ಷದಲ್ಲಿ ಅವರ ಗಳಿಕೆ 486 ಕೋಟಿ ರೂಪಾಯಿ. ಬಾಲಿವುಡ್ನ ಖಿಲಾಡಿ ಎಂದೇ ಖ್ಯಾತರಾಗಿರುವ ಅಕ್ಷಯ್ ಕುಮಾರ್ ಸಿನೆಮಾಗಳಿಗೆ ಭರ್ತಿ ಸಂಭಾವನೆ ಪಡೆಯುತ್ತಾರೆ.
ಇದಲ್ಲದೇ ಅಕ್ಷಯ್ ಕುಮಾರ್ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದು, ಕ್ರೀಡಾ ತಂಡವನ್ನೂ ನಡೆಸುತ್ತಿದ್ದಾರೆ. ಅನೇಕ ಬ್ರಾಂಡ್ಗಳ ಜಾಹೀರಾತುಗಳಲ್ಲೂ ಕಾಣಿಸಿಕೊಳ್ತಿದ್ದಾರೆ. ಭಾರತದಲ್ಲಿ ವೈಯಕ್ತಿಕ ಆದಾಯ ತೆರಿಗೆ ಸಲ್ಲಿಸುವವರ ಪಟ್ಟಿಯಲ್ಲಿ ಅಕ್ಷಯ್ ಮೊದಲ ಸ್ಥಾನದಲ್ಲಿದ್ದಾರೆ. ದೇಶದ ಅತಿ ದೊಡ್ಡ ತೆರಿಗೆದಾರ ಅಕ್ಷಯ್ ಕುಮಾರ್ಗೆ ‘ಸಮ್ಮಾನ್ ಪತ್ರ’ ಪ್ರಶಸ್ತಿಯನ್ನೂ ನೀಡಲಾಗಿದೆ. 2020-21ರಲ್ಲೂ ಅವರು 25.5 ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ಠೇವಣಿ ಮಾಡಿದ್ದರು.
ಈ ಬಾರಿ ಪ್ರಶಸ್ತಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಾಲಾಗಬಹುದೆಂದು ನಂಬಲಾಗಿದೆ. ಇದುವರೆಗೆ ಸಿಕ್ಕಿರುವ ಅಂಕಿ ಅಂಶಗಳ ಪ್ರಕಾರ ಮಹೇಂದ್ರ ಸಿಂಗ್ ಧೋನಿ 2022-23 ರ ಹಣಕಾಸು ವರ್ಷದಲ್ಲಿ 38 ಕೋಟಿ ರೂಪಾಯಿಗಳ ಬೃಹತ್ ಮುಂಗಡ ಆದಾಯ ತೆರಿಗೆಯನ್ನು ಠೇವಣಿ ಮಾಡಿದ್ದಾರೆ.