ಪ್ರತಿ ತಿಂಗಳ ಕೊನೆಯಲ್ಲಿ ವಾಹನ ತಯಾರಕ ಕಂಪನಿಗಳು ತಮ್ಮ ಮಾರಾಟದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುತ್ತವೆ. ಅದೇ ರೀತಿ ಜುಲೈನಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಗರಿಷ್ಠ ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಒಟ್ಟು 1,75,916 ಕಾರುಗಳು ಜುಲೈನಲ್ಲಿ ಸೇಲ್ ಆಗಿವೆ. ವಿಶೇಷ ಅಂದ್ರೆ ಕಾರುಗಳ ಮಾರಾಟದಲ್ಲಿ ಶೇ.8.28ರಷ್ಟು ಹೆಚ್ಚಾಗಿದೆ.
ಕಳೆದ ವರ್ಷದ ಇದೇ ತಿಂಗಳಲ್ಲಿ ಕಂಪನಿ ಒಟ್ಟು 1,62,462 ವಾಹನಗಳನ್ನು ಮಾರಾಟ ಮಾಡಿತ್ತು. ಮಾರುತಿ ಕಂಪನಿಯ ದೇಶೀಯ ಮಾರುಕಟ್ಟೆಯ ಮಾರಾಟವು ಕಳೆದ ತಿಂಗಳು 6.82 ರಷ್ಟು ಏರಿಕೆಯಾಗಿ 1,42,850 ವಾಹನಗಳು ಸೇಲ್ ಆಗಿವೆ. 2021 ರ ಜುಲೈನಲ್ಲಿ ಕಂಪನಿ ಭಾರತದಲ್ಲಿ 1,33,732 ಕಾರುಗಳನ್ನು ಮಾರಾಟ ಮಾಡಿತ್ತು.
ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ಭಾರತದ ಮಾರುಕಟ್ಟೆಯಲ್ಲಿ ಜುಲೈನಲ್ಲಿ 28,053 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ವರ್ಷದಿಂದ ವರ್ಷಕ್ಕೆ 33 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಕಂಪನಿಯು 21,046 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.
ಹುಂಡೈ ಕಂಪನಿಯ ಕಾರುಗಳ ಮಾರಾಟ ಕೂಡ ಜುಲೈ ತಿಂಗಳಿನಲ್ಲಿ ಶೇ.6ರಷ್ಟು ಹೆಚ್ಚಾಗಿದೆ. 63,851 ಕಾರುಗಳು ಬಿಕರಿಯಾಗಿವೆ. 2021ರ ಜುಲೈನಲ್ಲಿ 60,249 ಯುನಿಟ್‌ಗಳನ್ನು ಕಂಪನಿ ಮಾರಾಟ ಮಾಡಿತ್ತು. ಈ ವರ್ಷದ ಜುಲೈನಲ್ಲಿ ಕಂಪನಿಯ ದೇಶೀಯ ವಾಹನಗಳ ಮಾರಾಟವು ಶೇಕಡಾ 5.1 ರಷ್ಟು ಏರಿಕೆಯಾಗಿ 50,500 ಯುನಿಟ್‌ಗಳಿಗೆ ತಲುಪಿದೆ.
ಈ ರೇಸ್‌ನಲ್ಲಿ ಟಾಟಾ ಮೋಟರ್ಸ್ ಕೂಡ ಹಿಂದೆ ಬಿದ್ದಿಲ್ಲ. ಜುಲೈನಲ್ಲಿ 81,790 ಕಾರುಗಳು ಮಾರಾಟವಾಗಿವೆ. ಕಾರುಗಳ ಸೇಲ್ಸ್ ವರ್ಷದಿಂದ ವರ್ಷಕ್ಕೆ ಶೇಕಡಾ 51.12 ರಷ್ಟು ಹೆಚ್ಚಾಗಿದೆ. ಪ್ರಯಾಣಿಕ ವಾಹನಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಟಾಟಾ ಮೋಟಾರ್ಸ್ 2021ರ ಜುಲೈನಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಒಟ್ಟು 54,119 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.
ನಿಸ್ಸಾನ್ ಮೋಟಾರ್ ಇಂಡಿಯಾ ಸಹ ಕಳೆದ ತಿಂಗಳು 3667 ಕಾರುಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಒಟ್ಟು 4670 ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಹಾಗಾಗಿ ಕಂಪನಿಯ ಒಟ್ಟು ಕಾರುಗಳ ಮಾರಾಟ 8337 ಯುನಿಟ್‌ಗಳಿಗೆ ತಲುಪಿದೆ.