ಎಚ್ಐವಿ ಸೋಂಕಿತರನ್ನು ಸಮಾಜ ದೂರವೇ ಇಡುತ್ತದೆ. ಅವರಿಗೆ ಸ್ಥಾನಮಾನ ಹಾಗಿರಲಿ ಸರಿಯಾದ ಕೆಲಸ ಸಿಗುವುದು ತುಂಬಾ ಕಷ್ಟ. ಅಂಥದ್ರಲ್ಲಿ ಕೋಲ್ಕತ್ತಾದ ಕೆಫೆ ಒಂದು ಎಚ್‌ಐವಿ ಪೀಡಿತರಿಗೆ ಉದ್ಯೋಗಾವಕಾಶ ಕಲ್ಪಸಿಕೊಟ್ಟಿದೆ.
ವಿಶೇಷವೆಂದರೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಉದ್ಯೋಗಿಗಳು ಎಚ್ಐವಿ ಪಾಸಿಟಿವ್ ಆಗಿದ್ದಾರೆ. ಎಚ್‌ಐವಿ ಸೋಂಕಿತ ಸಿಬ್ಬಂದಿಯೇ ನಡೆಸುತ್ತಿರುವ ಏಷ್ಯಾದ ಮೊದಲ ಕೆಫೆ ಇದಾಗಿದೆ. ಇದಕ್ಕೆ ಕೆಫೆ ಪಾಸಿಟಿವ್ ಎಂದು ಹೆಸರಿಡಲಾಗಿದೆ.
ಎಚ್‌ಐವಿ ಸೋಂಕಿತರಲ್ಲಿ ಜಾಗೃತಿ ಮೂಡಿಸುವುದು ಮತ್ತು ಉದ್ಯೋಗ ಸೃಷ್ಟಿಸುವುದು ಇದರ ಉದ್ದೇಶ. ಈ ಕೆಫೆಯನ್ನು ಆನಂದಘರ್ ಎನ್‌ಜಿಒ ನಡೆಸುತ್ತಿದೆ. ವಿಕಲಾಂಗ ಮಕ್ಕಳು ಮತ್ತು ಎಚ್‌ಐವಿ ಪೀಡಿತರಿಗಾಗಿಯೇ ಕೆಲಸ ಮಾಡುವ ಎನ್ ಜಿ ಓ ಇದು. ಕಲ್ಲೋಲ್ ಘೋಷ್ ಕೆಫೆಯ ಸಂಸ್ಥಾಪಕರು. ಕಲ್ಲೋಲ್ ಘೋಷ್ ಅವರು ಫ್ರಾಂಕ್‌ಫರ್ಟ್‌ನಲ್ಲಿರುವ ಕೆಫೆಯಿಂದ ಸ್ಫೂರ್ತಿ ಪಡೆದು, ಇಲ್ಲೂ ಅದೇ ಪ್ರಯತ್ನ ಮಾಡಿದ್ದಾರೆ.
ಈ ಕೆಫೆ ಕಾಫಿ ಮತ್ತು ಸ್ಯಾಂಡ್‌ವಿಚ್‌ಗಳಿಗೆ ಹೆಸರುವಾಸಿಯಾಗಿದೆ. ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳೇ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಸವಿಯಲು ಬರ್ತಾರೆ. ಭಾರತದಲ್ಲಿ ಇಂತಹ 30 ಕೆಫೆಗಳನ್ನು ತೆರೆಯುವ ಯೋಜನೆ ಇದೆ ಎಂದು ಘೋಷ್ ತಿಳಿಸಿದ್ದಾರೆ. 800 ಜನರಿಗೆ ತರಬೇತಿ ನೀಡುವ ಯೋಜನೆಯನ್ನೂ ಹಮ್ಮಿಕೊಂಡಿದ್ದಾರೆ. ಕೆಫೆಯಲ್ಲಿ ಕೆಲಸ ಮಾಡುವವರು ಎಚ್‌ಐವಿ ಸೋಂಕಿತರೆಂದು ತಿಳಿದು ಗ್ರಾಹಕರು ಬರುತ್ತಾರೋ ಇಲ್ಲವೋ ಎಂಬ ಆತಂಕ ಅವರಿಗಿತ್ತು. ಆದ್ರೆ ಕೆಫೆ ಈಗ ಚೆನ್ನಾಗಿ ನಡೆಯುತ್ತಿರುವ ಬಗ್ಗೆ ಘೋಷ್ ಸಂತಸ ವ್ಯಕ್ತಪಡಿಸಿದ್ದಾರೆ.