ಭಾರತದಲ್ಲಿ ಸಕ್ಕರೆ ಕಾಯಿಲೆ ಪೀಡಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಮಧುಮೇಹ ಕಾಯಿಲೆಗೆ ಸಂಬಂಧಿಸಿದಂತೆ ಆಘಾತಕಾರಿ ಅಂಕಿ-ಅಂಶಗಳು ಬಹಿರಂಗವಾಗಿವೆ. ಪ್ರಸ್ತುತ ಭಾರತದಲ್ಲಿನ ಮಧುಮೇಹ ರೋಗಿಗಳ ಸಂಖ್ಯೆ 101 ಮಿಲಿಯನ್. ಮೂರು ವರ್ಷಗಳ ಹಿಂದೆ, ದೇಶದಲ್ಲಿ ಸುಮಾರು 70 ಮಿಲಿಯನ್ ಮಧುಮೇಹ ರೋಗಿಗಳಿದ್ದರು.
ಅತಿ ಶೀಘ್ರದಲ್ಲೇ ಸಕ್ಕರೆ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುವವರ ಒಟ್ಟಾರೆ ಸಂಖ್ಯೆ ಸುಮಾರು 136 ಮಿಲಿಯನ್. ಅಂದರೆ ದೇಶದ ಜನಸಂಖ್ಯೆಯ 15.3 ಪ್ರತಿಶತದಷ್ಟು ಜನರು ಇದರಿಂದ ಪ್ರಭಾವಿತರಾಗಿದ್ದಾರೆ.
ಗೋವಾದಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳಿದ್ದಾರೆ.ವರದಿಯ ಪ್ರಕಾರ ಬ್ರಿಟನ್ ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ICMRನ ಸಂಶೋಧನೆಯ ಪ್ರಕಾರ ಗೋವಾ, ಭಾರತದಲ್ಲೇ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿದೆ.ನಂತರದ ಸ್ಥಾನ ಪುದುಚೇರಿ ಮತ್ತು ಕೇರಳದ್ದು. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ಸಕ್ಕರೆ ಕಾಯಿಲೆ ಪೀಡಿತರ ಸಂಖ್ಯೆ ಕೊಂಚ ಕಡಿಮೆ ಇದೆ. ಕುಟುಂಬದಲ್ಲಿ ಯಾರಿಗಾದರೂ ಮಧುಮೇಹ ಕಾಯಿಲೆ ಇದ್ದಲ್ಲಿ ಅಂಥವರು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಸಕ್ಕರೆ ಕಾಯಿಲೆಯಿಂದ ಪಾರಾಗಲು ಯಾವ್ಯಾವ ರೀತಿ ಜಾಗರೂಕತೆ ವಹಿಸಬೇಕು ಎಂಬುದನ್ನು ನೋಡೋಣ.
ತೂಕ ಇಳಿಸಿ – ನಿಮ್ಮ ತೂಕ ಹೆಚ್ಚಿದ್ದರೆ ಇಂದಿನಿಂದಲೇ ಅದನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ತೂಕವನ್ನು 5 ರಿಂದ 10 ಪ್ರತಿಶತದಷ್ಟು ಕಡಿಮೆ ಮಾಡುವ ಮೂಲಕ, ಮಧುಮೇಹದ ಅಪಾಯವನ್ನು ತಪ್ಪಿಸಬಹುದು.
ಆಹಾರದಲ್ಲಿ ಬದಲಾವಣೆ– ತೂಕವನ್ನು ಕಳೆದುಕೊಳ್ಳುವುದರ ಜೊತೆಗೆ ಆಹಾರದಲ್ಲಿ ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳನ್ನು ಸೇರಿಸುವುದು ಬಹಳ ಮುಖ್ಯ. ಮೊಳಕೆಯೊಡೆದ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಸೇವನೆ ಮಾಡಿ. ಅನಾರೋಗ್ಯಕರ ಕೊಬ್ಬುಗಳು ಮತ್ತು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ.
ವ್ಯಾಯಾಮ ಮಾಡಿ – ವಾರದಲ್ಲಿ ಕನಿಷ್ಠ ಐದು ದಿನ ವ್ಯಾಯಾಮವನ್ನು ಅಭ್ಯಾಸ ಮಾಡಬೇಕು. ಇದರಿಂದ ಹೆಚ್ಚು ಕ್ರಿಯಾಶೀಲರಾಗಿರಬಹುದು, ಪರಿಣಾಮ ಮಧುಮೇಹದ ಅಪಾಯವು ಕಡಿಮೆಯಾಗುತ್ತದೆ.
ಕೆಟ್ಟ ಅಭ್ಯಾಸಗಳನ್ನು ತಪ್ಪಿಸಿ – ಸಿಗರೇಟ್ ಸೇದುವ ಚಟವು ಇನ್ಸುಲಿನ್ ಮಟ್ಟವನ್ನು ಅಸ್ತವ್ಯಸ್ತಗೊಳಿಸುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯಕ್ಕೆ ಕಾರಣವಾಗಬಹುದು. ನೀವು ಈಗಾಗಲೇ ಸಿಗರೇಟ್ ಅಥವಾ ಆಲ್ಕೋಹಾಲ್ ವ್ಯಸನಿಯಾಗಿದ್ದರೆ ಅದನ್ನು ಬಿಟ್ಟುಬಿಡಿ.
ಆಗಾಗ ತಪಾಸಣೆ ಮಾಡಿಸಿಕೊಳ್ಳಿ – ಟೈಪ್ 2 ಮಧುಮೇಹವನ್ನು ತಪ್ಪಿಸಲು ಕಾಲಕಾಲಕ್ಕೆ ವೈದ್ಯರ ಅಭಿಪ್ರಾಯವನ್ನು ತೆಗೆದುಕೊಳ್ಳುವುದು ಅವಶ್ಯಕ. ನೀವು ಅಪಾಯದ ಸಮೀಪದಲ್ಲಿದ್ದರೆ ವೈದ್ಯರ ಸಲಹೆಯು ನಿಮಗೆ ಸಹಾಯಕವಾಗಬಹುದು.