ಚೀನಾ ಮೂಲದ ಟಿಕ್‌ಟಾಕ್ ಜಗತ್ತಿನಾದ್ಯಂತ ಜನಪ್ರಿಯವಾಗಿದೆ. ಬಹುತೇಕ ಜನರು ಟಿಕ್‌ಟಾಕ್‌ಗೆ ಮಾರು ಹೋಗಿದ್ದಾರೆ. ಭಾರತದಲ್ಲೂ ಟಿಕ್‌ಟಾಕ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಆದ್ರೆ ಸರ್ಕಾರ ಅದನ್ನು ಈಗಾಗ್ಲೇ ನಿಷೇಧಿಸಿದೆ. ಭಾರತದಂತೆಯೇ ಅಮೆರಿಕ ಕೂಡ ಚೀನಾ ಮೂಲದ ಈ ಅಪ್ಲಿಕೇಶನ್ ಅನ್ನು ಬ್ಯಾನ್ ಮಾಡಲು ಮುಂದಾಗಿದೆ. ಟಿಕ್‌ಟಾಕ್ ಅಪ್ಲಿಕೇಶನ್ ಅನ್ನು ನಿರ್ಬಂಧಿಸುವ ಮಸೂದೆಗೆ ವಿದೇಶಾಂಗ ವ್ಯವಹಾರಗಳ ಹೌಸ್ ಮುಂದಿನ ತಿಂಗಳು ಮತ ಚಲಾಯಿಸುವ ಸಾಧ್ಯತೆಯಿದೆ. ರಾಷ್ಟ್ರೀಯ ಭದ್ರತೆಯ ಕಾರಣಗಳನ್ನು ನೀಡಿ, ಟಿಕ್‌ಟಾಕ್ ನಿಷೇಧಕ್ಕೆ ಅಮೆರಿಕ ಮುಂದಾಗಿದೆ.
ಈ ಮಸೂದೆಯು ಶ್ವೇತಭವನಕ್ಕೆ ಟಿಕ್‌ಟಾಕ್ ಅನ್ನು ನಿಷೇಧಿಸುವ ಕಾನೂನು ಅಧಿಕಾರವನ್ನು ನೀಡಲಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ, ಡೇಟಾ ಸುರಕ್ಷತೆ, ಗೌಪ್ಯತೆ ಮತ್ತು ಆನ್‌ಲೈನ್ ಹಾನಿಗಳಂತಹ ಅನೇಕ ಕಾರಣಗಳಿಂದ ಟಿಕ್ ಟಾಕ್ ಅನ್ನು ಅಮೆರಿಕ ಬ್ಯಾನ್ ಮಾಡಲು ಮುಂದಾಗಿದೆ. ಇದೊಂದೇ ಸೇವೆಯನ್ನು ನಿಷೇಧಿಸುವ ಮೂಲಕ ಸಮಸ್ಯೆ ಪರಿಹರಿಸಬಹುದು ಅಥವಾ ಅಮೆರಿಕನ್ನರನ್ನು ಸುರಕ್ಷಿತವಾಗಿಸಬಹುದು ಎಂದರ್ಥವಲ್ಲ, ಸಮಸ್ಯೆಗಳನ್ನು ಸಮಗ್ರವಾಗಿ ಪರಿಹರಿಸುವ ಪ್ರಯತ್ನಗಳ ಮೇಲೆ ತಮ್ಮ ಶಕ್ತಿಯನ್ನು ಕೇಂದ್ರೀಕರಿಸುತ್ತೇವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ 19 ರಾಜ್ಯಗಳಲ್ಲಿನ ಸ್ಥಳೀಯ ಆಡಳಿತಗಳು ಈಗಾಗಲೇ ಸರ್ಕಾರ ನೀಡಿದ ಸಾಧನಗಳಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸಿವೆ. 2020 ರಲ್ಲಿ ಬಳಕೆದಾರರ ಡೇಟಾವನ್ನು ಹಂಚಿಕೊಂಡ ಆರೋಪದ ಹಿನ್ನೆಲೆಯಲ್ಲಿ ಟಿಕ್‌ಟಾಕ್ ಮತ್ತು ಹಲವಾರು ಇತರ ಚೀನೀ ಅಪ್ಲಿಕೇಶನ್‌ಗಳನ್ನು ಭಾರತ ನಿಷೇಧಿಸಿತ್ತು. ರಾಷ್ಟ್ರೀಯ ಭದ್ರತಾ ಕಾಳಜಿಗಳನ್ನು ಪರಿಹರಿಸಲು ಟಿಕ್‌ಟಾಕ್ ಪ್ರಸ್ತುತ ಯುಎಸ್ ನ್ಯಾಯಾಂಗ ಇಲಾಖೆಯೊಂದಿಗೆ ಒಪ್ಪಂದವನ್ನು ಮಾತುಕತೆ ನಡೆಸುತ್ತಿದೆ.
ವರದಿಗಳ ಪ್ರಕಾರ ಟಿಕ್‌ಟಾಕ್‌ನ ಮೂಲ ಕಂಪನಿಯಾದ ಚೀನಾದ ಬೈಟ್‌ಡ್ಯಾನ್ಸ್, ಇಬ್ಬರು ಯುಎಸ್ ಪತ್ರಕರ್ತರ ಡೇಟಾವನ್ನು ಮತ್ತು ಅವರೊಂದಿಗೆ ಸಂಪರ್ಕ ಹೊಂದಿದ್ದವರ ಡೇಟಾವನ್ನು ಕೂಡ ಪ್ರವೇಶಿಸಿದೆ ಎನ್ನಲಾಗ್ತಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿಯೂ ಇಂಥದ್ದೇ ಆರೋಪ ಕೇಳಿಬಂದಿತ್ತು. ಅಮೆರಿಕದ ಕೆಲವು ವ್ಯಕ್ತಿಗಳನ್ನು ಪತ್ತೆ ಹಚ್ಚಲು ಡೇಟಾವನ್ನು ಬಳಸಲಾಗಿದೆ ಎಂಬ ಆರೋಪವಿತ್ತು. ಆದರೆ ಟಿಕ್‌ಟಾಕ್ ಅದನ್ನು ನಿರಾಕರಿಸಿತ್ತು.