ಕೊರೊನಾದ ಮೂರೂ ಅಲೆಗಳು ಇಡೀ ಜಗತ್ತನ್ನೇ ತಲ್ಲಣಗೊಳಿಸಿವೆ. ಇದೀಗ ನಾಲ್ಕನೇ ಅಲೆ ಬರಬಹುದು ಅನ್ನೋ ಆತಂಕ ಮತ್ತೆ ಶುರುವಾಗಿದೆ. ಭಾರತಕ್ಕೂ ನಾಲ್ಕನೇ ಅಲೆ ಬರಬಹುದಾ ಅನ್ನೋದು ಬಹುತೇಕರ ಪ್ರಶ್ನೆ. ಬಂದರೆ ಏನು ಮಾಡಬೇಕು? ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳೇನು ಎಂಬ ಬಗ್ಗೆ ತಜ್ಞ ವೈದ್ಯರೇ ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಮೊದಲ ಅಲೆಯಲ್ಲಿ ಆಲ್ಫಾ ಮತ್ತು ಎರಡನೇ ಅಲೆಯಲ್ಲಿ ಅತ್ಯಂತ ಭಯಾನಕವಾದ ಡೆಲ್ಟಾ ಲಕ್ಷಾಂತರ ಜನರನ್ನು ಬಲಿ ಪಡೆದಿದ್ದು ಈಗ ಇತಿಹಾಸ. ಮೂರನೇ ಅಲೆಯಲ್ಲಿ ಓಮಿಕ್ರಾನ್ ಬಂದಿತ್ತು. ಆಗಲೂ ಪ್ರತಿದಿನ ಎರಡು ಲಕ್ಷ ಪ್ರಕರಣಗಳು ಬರುತ್ತಿದ್ದವು. ಜಗತ್ತಿನಲ್ಲಿ ಕೊರೊನಾ ಸೋಂಕು ಇನ್ನೂ ಮುಗಿದಿಲ್ಲ.
ಸೋಂಕು ಕಡಿಮೆ ಇರೋದ್ರಿಂದ ಕೋವಿಡ್ ತೊಲಗಿ ಹೋಗಬಹುದು ಅನ್ನೋದು ನಮ್ಮ ನಿರೀಕ್ಷೆ. ಆದ್ರೆ ಹೊಸ ಅಲೆ ಬರುವುದು ಬಹುತೇಕ ಪಕ್ಕಾ ಅನ್ನೋದು ತಜ್ಞರ ಲೆಕ್ಕಾಚಾರ. ಆದ್ರೆ ವೈರಸ್ ಮತ್ತೆ ಮತ್ತೆ ರೂಪಾಂತರಗೊಳ್ಳುತ್ತಿರುವುದರಿಂದ ಅದು ಕ್ಷೀಣಿಸುತ್ತಿದೆ. ಕೊರೊನಾ ನಾಲ್ಕನೇ ಅಲೆ ಬಂದರೂ ಅಷ್ಟೊಂದು ಭಯಾನಕವಾಗಿರುವುದಿಲ್ಲ.
ಕೋವಿಡ್ ಲಕ್ಷಣಗಳು ಸೌಮ್ಯವಾಗಿದ್ದರೂ ಅದರ ಅಡ್ಡಪರಿಣಾಮಗಳು ಹಲವು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ವೃದ್ಧರು ಅದರಲ್ಲೂ ಕ್ಯಾನ್ಸರ್, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿದ್ದರೆ ಕೊರೊನಾ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಹಾಗಾಗಿ ಜನನಿಬಿಡ ಸ್ಥಳಕ್ಕೆ ಹೋದರೆ ಮಾಸ್ಕ್ ಧರಿಸಲೇಬೇಕು.
ಅನಾರೋಗ್ಯ ಇರುವವರಿಗೆ ದೀರ್ಘಾವಧಿಯ ಕೋವಿಡ್ ಬರುವ ಸಾಧ್ಯತೆ ಹೆಚ್ಚು. ಅದು ಹೃದಯದ ಸಮಸ್ಯೆಗೂ ಕಾರಣವಾಗಬಲ್ಲದು. ಅನೇಕ ಜನರಲ್ಲಿ ಮೂತ್ರಪಿಂಡಗಳ ತೊಂದರೆ ಇರುತ್ತದೆ. ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುತ್ತಾರೆ. ಇಂಥವರಿಗೆ ಸೋಂಕು ತಗುಲಿದರೆ ಗುಣಮುಖರಾಗುವುದು ಬಹಳ ಕಷ್ಟ. ಕೋವಿಡ್ ನಂತರ ರಕ್ತದೊತ್ತಡ ಸಮಸ್ಯೆ ಕೂಡ ಶುರುವಾಗಬಹುದು.
ಹಾಗಾಗಿ ಕೊರೊನಾ ಕಡಿಮೆಯಾಗಿದೆ ಅನ್ನೋ ಕಾರಣಕ್ಕೆ ನಿರ್ಲಕ್ಷ ಬೇಡ. ಜನರು ಎಚ್ಚರಿಕೆಯಲ್ಲಿ ಇರುವುದು ಒಳಿತು. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಅನ್ನು ಮರೆಯಬೇಡಿ ಅನ್ನೋದು ವೈದ್ಯರ ಎಚ್ಚರಿಕೆ. ನಾಲ್ಕನೇ ಅಲೆ ಬರುವ ಮೊದಲೇ ನಾಗರಿಕರು ಎಚ್ಚೆತ್ತುಕೊಂಡರೆ ಸರ್ಕಾರಗಳು ಕೂಡ ಅದನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.