ನಾನ್ ವೆಜ್ ಪ್ರಿಯರಿಗೆ ಭಾನುವಾರ ಬಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ರಜಾ ದಿನವಾಗಿದ್ದರಿಂದ ನಾನ್ ವೆಜ್ ಗ್ಯಾರಂಟಿ ಇದ್ದೇ ಇರುತ್ತದೆ. ಮಟನ್ ಕರ್ರಿ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
1 ಕೆ.ಜಿ. ಮಟನ್, 1 ಬೆಳ್ಳುಳ್ಳಿ, 2 ಸ್ಪೂನ್ ಅರಿಶಿಣ, 8 ಲವಂಗ, 3 ಹಸಿರು ಏಲಕ್ಕಿ, 8 ಕೆಂಪು ಮೆಣಸಿನ ಕಾಯಿ, 4 ಈರುಳ್ಳಿ, 1 ದೊಡ್ಡ ಈರುಳ್ಳಿ ಪ್ರತ್ಯೇಕ, 2 ಕಪ್ ಕೊಬ್ಬರಿ ತುರಿ, 2 ಸ್ಪೂನ್ ಗಸಗಸೆ, 8 ಕರಿ ಮೆಣಸಿನ ಕಾಳು, 2 ಸ್ಪೂನ್ ಮೆಣಸಿನ ಕಾಯಿ ಪುಡಿ, ಶುಂಠಿ, ದಾಲ್ಚಿನ್ನಿ, ಉಪ್ಪು.
ತಯಾರಿಸುವ ವಿಧಾನ:
ಮೊದಲಿಗೆ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಪುಡಿ ಉಪ್ಪು, ಅರಿಶಿಣವನ್ನು ಅದಕ್ಕೆ ಸೇರಿಸಿರಿ.
ಸಣ್ಣ ತುಂಡುಗಳಾಗಿ ಮಟನ್ ಕತ್ತರಿಸಿಕೊಂಡು ರುಬ್ಬಿದ ಪದಾರ್ಥವನ್ನು ಅದರ ಮೇಲೆ ಸವರಿ ಒಂದೂವರೆ ಗಂಟೆ ಇಡಿ.
1 ದೊಡ್ಡ ಈರುಳ್ಳಿಯನ್ನು ಕೆಂಡದ ಮೇಲೆ ಸುಡಬೇಕು. ಬಳಿಕ ಕೊಬ್ಬರಿ ತುರಿಯನ್ನು ಹುರಿದುಕೊಂಡು, ಅದರ ಜೊತೆಗೆ ಸುಟ್ಟ ಈರುಳ್ಳಿ, ಗಸಗಸೆ, ಲವಂಗ, ಏಲಕ್ಕಿ, ಕರಿಮೆಣಸು, ಮೆಣಸಿನಕಾಯಿ ಪುಡಿ, ಕೆಂಪು ಮೆಣಸಿನಕಾಯಿ ರುಬ್ಬಿಕೊಳ್ಳಬೇಕು.
8 ಸ್ಪೂನ್ ತುಪ್ಪ ಕಾಯಿಸಿ ಅದರಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿಗಳನ್ನು ಹಾಕಿ ಹುರಿಯಬೇಕು. ಸ್ವಲ್ಪ ನೀರು ಹಾಕಿ ಕುದಿಸಬೇಕು. ನಂತರ ಅದಕ್ಕೆ ರುಬ್ಬಿದ ಮಸಾಲೆ ಮತ್ತು ಮಟನ್ ಹಾಕಿ ಬೇಕೆನಿಸಿದರೆ ನೀರು ಹಾಕಿ ಬೇಯಿಸಬೇಕು. ಬೆಂದ ನಂತರ ಕೆಳಗೆ ಇಳಿಸಿ ಸಣ್ಣಗೆ ಹೆಚ್ಚಿದ ಕೊತಂಬರಿ ಸೊಪ್ಪನ್ನು ಹಾಕಿರಿ. ಬಿಸಿಯಾಗಿರುವಾಗಲೇ ರುಚಿ ನೋಡಿ.