ಬಿರಿಯಾನಿ ತಿನ್ನಬೇಕು ಎಂಬ ಆಸೆ ಆಗುತ್ತಿದೆ. ಚಿಕನ್ ತಂದು ಮಾಡುವುದಕ್ಕೆ ಆಗಲ್ಲ ಎನ್ನುವವರು ಸುಲಭವಾಗಿ ಮನೆಯಲ್ಲಿ ಮೊಟ್ಟೆ ಬಿರಿಯಾನಿ ಮಾಡಿಕೊಂಡು ಸವಿಯಿರಿ.
ಬೇಕಾಗುವ ಸಾಮಾಗ್ರಿಗಳು:
ಎಣ್ಣೆ – 2 ಟೇಬಲ್ ಸ್ಪೂನ್, ತುಪ್ಪ – 2 ಟೇಬಲ್ ಸ್ಪೂನ್, ಬಾಸುಮತಿ ಅಕ್ಕಿ – 1 ಕಪ್, ಜೀರಿಗೆ – 1 ಟೀ ಸ್ಪೂನ್, ಚಕ್ಕೆ – 1 ಚಿಕ್ಕ ತುಂಡು, ಏಲಕ್ಕಿ – 4, ಲವಂಗ – 4, ಈರುಳ್ಳಿ – 1 ದೊಡ್ಡದ್ದು ಉದ್ದಕ್ಕೆ ಕತ್ತರಿಸಿಕೊಳ್ಳಿ. ಹಸಿಮೆಣಸು – 4 ಸೀಳಿಕೊಂಡಿದ್ದು, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಟೇಬಲ್ ಸ್ಪೂನ್, ಮೊಸರು – 1/2 ಕಪ್, ಖಾರದ ಪುಡಿ – 1 ಟೀ ಸ್ಪೂನ್, ಕೊತ್ತಂಬರಿ ಪುಡಿ – 2 ಟೀ ಸ್ಪೂನ್, ಜೀರಿಗೆ ಪುಡಿ – 1 ಟೀ ಸ್ಪೂನ್, ಅರಿಶಿನ – 1 ಟೀ ಸ್ಪೂನ್, ಗರಂ ಮಸಾಲ – 2 ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್, ಪುದೀನಾ ಎಲೆ – 1/4 ಕಪ್, ಮೊಟ್ಟೆ – 5(ಬೇಯಿಸಿ ಸಿಪ್ಪೆ ತೆಗೆದಿದ್ದು)
ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು ½ ಗಂಟೆಗಳ ಕಾಲ ನೆನಸಿಡಿ. ನಂತರ ಒಂದು ಪಾತ್ರೆಗೆ 8 ಗ್ಲಾಸ್ ನೀರು ಹಾಕಿ ಅದು ಕುದಿ ಬರುತ್ತಿದ್ದಂತೆ ಅದಕ್ಕೆ ಏಲಕ್ಕಿ 2, ಲವಂಗ, 2, ಪಲಾವ್ ಎಲೆ , ಉಪ್ಪು, ಜೀರಿಗೆ ಹಾಕಿ ನಂತರ ಅದಕ್ಕೆ ಅಕ್ಕಿ ಸೇರಿಸಿ ಸ್ವಲ್ಪ ಎಣ್ಣೆ ಹಾಕಿ 8 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ಇದು 75% ನಷ್ಟು ಬೆಂದರೆ ಸಾಕು. ನಂತರ ನೀರನ್ನು ಬಸಿದುಕೊಂಡು ಅನ್ನವನ್ನು ಒಂದು ಕಡೆ ಎತ್ತಿಟ್ಟುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಈರುಳ್ಳಿ ಸೇರಿಸಿ, ಹಸಿಮೆಣಸು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮಿಕ್ಸ್ ಮಾಡಿ ನಂತರ ಮೊಸರು ಹಾಕಿ ಮಸಾಲೆ ಪುಡಿಗಳನ್ನೆಲ್ಲಾ ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಉಪ್ಪು ಹಾಕಿ ಮೊಟ್ಟೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕುದಿಸಿ. ನಂತರ ಬೇಯಿಸಿಟ್ಟುಕೊಂಡ ಬಾಸುಮತಿ ಅನ್ನವನ್ನು ಎಲ್ಲಾ ಕಡೆ ಸಮನಾಗಿ ಹರಡಿ. ಇದರ ಮೇಲೆ ಒಂದು ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.