ಯಾವುದೇ ವಾಹನಗಳನ್ನು ತೆಗೆದುಕೊಳ್ಳಲು ಹೋದಾಗ ಗ್ರಾಹಕರು ಅದರ ಮೈಲೇಜ್ ಕುರಿತು ಹೆಚ್ಚಿನ ಗಮನ ಹರಿಸುತ್ತಾರೆ. ಮುಗಿಲು ಮುಟ್ಟಿರುವ ಪೆಟ್ರೋಲ್ – ಡೀಸೆಲ್ ಬೆಲೆಯ ಕಾರಣಕ್ಕೆ ಇದು ಅನಿವಾರ್ಯ ಕೂಡಾ ಹೌದು. ಆದರೆ ಕೆಲವೊಬ್ಬರು ಇಂಧನ ಕಾರ್ಯಕ್ಷಮತೆ ಕುರಿತು ಸುಳ್ಳು ಭರವಸೆ ನೀಡಿ ಬಳಿಕ ಕೇಳಿದರೆ ನಾನಾ ಸಬೂಬು ಹೇಳುತ್ತಾರೆ.
ಈ ರೀತಿ ಹೆಚ್ಚಿನ ಮೈಲೇಜ್ ನೀಡುತ್ತದೆ ಎಂಬ ಕಾರು ತಯಾರಿಕಾ ಕಂಪನಿ ಹಾಗೂ ಡೀಲರ್ ಮಾತು ನಂಬಿದ ಮಹಿಳೆಯೊಬ್ಬರು ಕಾರು ಖರೀದಿಸಿದ್ದು, ಬಳಿಕ ಇಂಧನ ಕಾರ್ಯಕ್ಷಮತೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲವೆಂಬುದನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಅವರು ಪರಿಹಾರ ಕೋರಿ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಮೊರೆ ಹೋಗಿದ್ದು, ಇದೀಗ ಅವರಿಗೆ 3.10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಯೋಗ ಆದೇಶಿಸಿದೆ.
ಇಂತಹದೊಂದು ಘಟನೆ ಕೇರಳದಲ್ಲಿ ನಡೆದಿದ್ದು, ತ್ರಿಶೂರ್ ನಿವಾಸಿ ಸೌಧಾಮಿನಿ ಎಂಬವರು ಫೋರ್ಡ್ ಕ್ಲಾಸಿಕ್ ಡೀಸೆಲ್ ಕಾರನ್ನು 2014ರಲ್ಲಿ 8.90 ಲಕ್ಷ ರೂಪಾಯಿಗಳಿಗೆ ಖರೀದಿಸಿದ್ದರು. ಆ ಸಂದರ್ಭದಲ್ಲಿ ಕಾರು ಪ್ರತಿ ಲೀಟರ್ಗೆ 32 ಕಿಮೀ ಮೈಲೇಜ್ ನೀಡುತ್ತದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಸೌದಾಮಿನಿ ಅವರ ಕಾರು ಕೇವಲ ಪ್ರತಿ ಲೀಟರ್ ಡೀಸೆಲ್ ಗೆ 16 ಕಿ.ಮೀ. ಮೈಲೇಜ್ ನೀಡುತ್ತಿರುವುದು ಕಂಡುಬಂದಿತ್ತು.
ಹೀಗಾಗಿ ಅವರು ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಮೊರೆ ಹೋಗಿದ್ದು, ಆಯೋಗದ ಸೂಚನೆಯಂತೆ ತಜ್ಞರು ಮೈಲೇಜ್ ಪರಿಶೀಲಿಸಿದಾಗ ಪ್ರತಿ ಲೀಟರ್ ಡೀಸೆಲ್ ಗೆ ಕೇವಲ 19.6 ಕಿಲೋಮೀಟರ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಆರ್ಥಿಕ ನಷ್ಟಕ್ಕೆ ಒಳಗಾಗಿರುವ ದೂರುದಾರರಿಗೆ 1.50 ಲಕ್ಷ ರೂ. ಪರಿಹಾರ, ಅವರು ಅನುಭವಿಸಿದ ಸಂಕಷ್ಟಕ್ಕೆ 1.50 ಲಕ್ಷ ರೂ. ಪರಿಹಾರ ಮತ್ತು ವ್ಯಾಜ್ಯದ ವೆಚ್ಚ 10 ಸಾವಿರ ರೂಪಾಯಿಯನ್ನು ಶೇಕಡಾ 9 ರಷ್ಟು ಬಡ್ಡಿಯೊಂದಿಗೆ ನೀಡುವಂತೆ ಆದೇಶಿಸಲಾಗಿದೆ.