
ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಸಿ.ಆರ್.ಪಿ.ಎಫ್. ನ ಸಹಾಯಕ ಸಬ್ ಇನ್ಸ್ ಪೆಕ್ಟರ್ ನಿರಂಜನ್ ಸಿಂಗ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಾಳಿಯಲ್ಲಿ ನಿರಂಜನ್ ಸಿಂಗ್ ಅವರ ಜೊತೆಗಿದ್ದ ಹೆಡ್ ಕಾನ್ಸ್ ಟೇಬಲ್ ವಿಶಾಲ್ ಸಿಂಗ್ ಹುತಾತ್ಮರಾಗಿದ್ದಾರೆ.
ಆಸ್ಪತ್ರೆ ಬೆಡ್ ಮೇಲಿದ್ದರೂ ನಿರಂಜನ್ ಸಿಂಗ್ ಅವರ ಕೆಚ್ಚು ಕಡಿಮೆಯಾಗಿಲ್ಲ. ಅವರು ಆಡಿರುವ ಮಾತುಗಳ ವಿಡಿಯೋ ಒಂದು ಈಗ ವೈರಲ್ ಆಗಿದ್ದು, ಭಾರತಾಂಬೆಯ ವೀರ ಪುತ್ರನ ಕುರಿತು ದೇಶದ ಜನತೆ ಹೆಮ್ಮೆ ಪಡುತ್ತಿದ್ದಾರೆ.
ಮಿಲಿಟರಿ ಆಸ್ಪತ್ರೆಯಲ್ಲಿರುವ ನಿರಂಜನ್ ಸಿಂಗ್ ಅವರನ್ನು ಶ್ರೀನಗರ ಬೇಸ್ ಚಿನಾರ್ ಕಾರ್ಪ್ಸ್ ನ ಭಾರತೀಯ ಸೇನೆ ಜನರಲ್ ಅಫೀಸರ್ ಕಮಾಂಡಿಂಗ್ (ಜಿಒಸಿ) ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆ ಭೇಟಿ ಮಾಡಿದ್ದರು. ಈ ವೇಳೆ ಬೆಡ್ ಮೇಲೆ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದರೂ ಸಿ.ಆರ್.ಪಿ.ಎಫ್. ಎಎಸ್‌ಐ ನಿರಂಜನ್ ಕುಮಾರ್, ಭಯೋತ್ಪಾದಕರನ್ನು ಬಿಡಬೇಡಿ ಕೊಲ್ಲಿ ಎನ್ನುತ್ತಾರೆ.
ಅದಕ್ಕೆ ಡಿ.ಪಿ. ಪಾಂಡೆಯವರು ಖಂಡಿತ ಆ ಕೆಲಸ ಮಾಡೋಣಾ. ನೀನೂ ಸಹ ಅದಕ್ಕೆ ತಯಾರಾಗಿದ್ದೀಯಾ ಎನ್ನುತ್ತಾರೆ. ಅದಕ್ಕೆ ನಿರಂಜನ್ ಕುಮಾರ್, ಹೌದು ಎಂದು ಹೇಳಿದ್ದು, ನಿನ್ನ ಈ ಹೋರಾಟದ ಮನೋಭಾವದಿಂದಲೇ ನೀನು ಶೀಘ್ರವೇ ಚೇತರಿಸಿಕೊಳ್ಳುತ್ತಿಯಾ. ಬಳಿಕ ಭಯೋತ್ಪಾದಕರನ್ನು ಬಗ್ಗುಬಡಿಯೋಣಾ ಎನ್ನುತ್ತಾರೆ ಡಿ.ಪಿ. ಪಾಂಡೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ವೀರ ಯೋಧ ನಿರಂಜನ್ ಕುಮಾರ್ ಶೀಘ್ರ ಚೇತರಿಕೆಗೆ ದೇಶದ ಜನ ಹಾರೈಸುತ್ತಿದ್ದಾರೆ.
