ರಾಜ್ಯ ಸರ್ಕಾರ ಘೋಷಿಸಿರುವ ‘ಉಚಿತ’ ಯೋಜನೆಗೆ ಅಕ್ಕಿ ನೀಡಲು ನಿರಾಕರಿಸಿರುವ ಭಾರತೀಯ ಆಹಾರ ನಿಗಮದ ನಿಲುವಿಗೆ ಕಿಡಿ ಕಾರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಭತ್ತ ಬೆಳೆಯಲು ಕೇಂದ್ರ ಸರ್ಕಾರವೇನು ಜಮೀನು ಇಟ್ಟುಕೊಂಡಿದೆಯೇ ? ರಾಜ್ಯ ಸರ್ಕಾರಗಳಿಂದ ಪಡೆದ ಅಕ್ಕಿಯೇ ಅವರ ಬಳಿ ಇರುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರದಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಪದೇ ಪದೇ ಒಕ್ಕೂಟ ವ್ಯವಸ್ಥೆಯ ಬಗ್ಗೆ ಹೇಳುತ್ತಾರೆ. ಆದರೆ ರಾಜ್ಯದ ಜನಪರ ಯೋಜನೆಗೆ ಅಕ್ಕಿ ನೀಡಲು ಹಿಂದೇಟು ಹಾಕುವ ಮೂಲಕ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಯಾರು ಎಷ್ಟೇ ರಾಜಕಾರಣ ಮಾಡಿದರೂ ಸಹ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಜುಲೈ 1ರಿಂದ ಅಕ್ಕಿ ವಿತರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಛತ್ತೀಸ್ಗಡದಲ್ಲಿ ಅಕ್ಕಿ ಲಭ್ಯವಿದ್ದರೂ ಸಹ ನಮಗೆ ಬೇಕಾದಷ್ಟು ಸಿಗುತ್ತಿಲ್ಲ. ಹೀಗಾಗಿ ಪಂಜಾಬ್ ಸರ್ಕಾರದ ಜೊತೆಗೂ ಮಾತುಕತೆ ನಡೆಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.