ತಮಿಳುನಾಡಿನ ವೆಲ್ಲೂರಿನಲ್ಲಿ ಶ್ರೀಪುರಂ ಗೋಲ್ಡನ್ ಟೆಂಪಲ್ ಇದೆ. ಇದು ಲಕ್ಷ್ಮೀ ದೇವತೆಗೆ ಅರ್ಪಿತವಾದ ಮಹಿಮಾನ್ವಿತವಾದ ದೇವಾಲಯ.
ದೇವಾಲಯದ ಗೋಪುರವು ಚಿನ್ನದಿಂದ ಲೇಪಿತವಾಗಿದೆ. ಈ ದೇವಾಲಯವು ಶ್ರೀ ಚಕ್ರವನ್ನು ಪ್ರತಿನಿಧಿಸುವ ನಕ್ಷತ್ರದ ಆಕಾರವನ್ನು ಹೊಂದಿದೆ. ಈ ದೇವಾಲಯವು ಮಲಕ್ಕೊಡಿ ಎಂಬ ಸಣ್ಣದಾದ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. 2007 ರಲ್ಲಿ ಈ ದೇವಾಲಯದ ನಿರ್ಮಾಣ ಕಾರ್ಯ ನಡೆದಿತ್ತು. 1.5 ಟನ್ ಚಿನ್ನದಿಂದ ಲಕ್ಷ್ಮಿ ನಾರಾಯಣಿ ಮಂಟಪ ವಿಮಾನಂ ಮತ್ತು ಅರ್ಧ ಮಂಟಪಂ ಅನ್ನು ನಿರ್ಮಿಸಲಾಗಿದೆ.
ಈ ದೇವಾಲಯದ ನಿರ್ಮಾಣಕ್ಕೆ ಸುಮಾರು 600 ಕೋಟಿ ಖರ್ಚಾಗಿದೆ ಎಂದು ಊಹಿಸಲಾಗಿದೆ. 400 ಕ್ಕೂ ಅಧಿಕ ಕುಶಲಕರ್ಮಿಗಳು ಸತತ 6 ವರ್ಷ ದುಡಿದು ದೇವಾಲಯ ನಿರ್ಮಿಸಿದ್ದಾರೆ.
ಇಲ್ಲಿರುವ ಲಕ್ಷ್ಮೀ ದೇವಿಯ ವಿಗ್ರಹವು 70 ಕೆಜಿ ತೂಕದ್ದಾಗಿದೆ. ಈ ಗರ್ಭಗುಡಿಯ ಸುತ್ತ ನೀರಿರುವುದರಿಂದ ಚಿನ್ನದ ದೇಗುಲ ಅದರಲ್ಲಿ ಪ್ರತಿಫಲನಗೊಂಡು ಮತ್ತಷ್ಟು ಗಾಢ ಬಣ್ಣದಿಂದ ಹೊಳೆಯುತ್ತದೆ. ಇದರ ಸೊಬಗನ್ನು ಕಣ್ತುಂಬಿಕೊಳ್ಳಲೆಂದೇ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.