ನವ ದೆಹಲಿ: ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ತನಗೆ ವಹಿಸಿಕೊಂಡ ನಂತರ ಒಂದಿಷ್ಡು ಬದಲಾವಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಬ್ಲೂ ಟಿಕ್ ಗೆ ಹಣ ಪಾವತಿ ಕೂಡ ಒಂದು. ನೀವು ಬ್ಲೂ ಟಿಕ್ ಪಡೆಯಬೇಕು ಎಂದಾದರೆ ಇಂತಿಷ್ಟು ಹಣ ಅಂತ ತಿಂಗಳಿಗೆ ಇಡಬೇಕಿದೆ. ಈ ಸೇವೆ ಭಾರತದಲ್ಲಿ ಆರಂಭ ಆಗಿತ್ತು. ಈಗಾಗಲೇ ಅನೇಕರು ಹಣ ಪಾವತಿ ಮಾಡಿ ಬ್ಲೂ ಟಿಕ್ ಕೂಡ ಪಡೆದುಕೊಂಡಿದ್ದರು. ಇದೀಗ ಈ ಸೇವೆ ಬೇರೆ ದೇಶಗಳಿಗೆ ವಿಸ್ತರಿಸಿದೆ.
ಹೌದು, ಭಾರತದ ಟ್ವಿಟ್ಟರ್ ಬಳಕೆದಾರರಿಗೆ ವೆಬ್‌ನಲ್ಲಿ ಟ್ವಿಟರ್ ವೆರಿಫೈಡ್ ಬ್ಲೂ ಸರ್ವಿಸ್‌ಗೆ ಪ್ರತಿ ತಿಂಗಳಿಗೆ 650 ರೂಪಾಯಿ ಹಾಗೂ ಆ್ಯಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಿಗೆ ಪ್ರತಿ ತಿಂಗಳಿಗೆ 900 ರೂಪಾಯಿ ಚಾರ್ಜ್ ಮಾಡಲಾಗುತ್ತಿದೆ. ಇದೀಗ ಈ ಸೇವೆ ಅಮೆರಿಕ, ಕೆನಡಾ, ಜಪಾನ್, ಯುನೈಟೆಡ್ ಕಿಂಗಡಂ ಮತ್ತು ಸೌದಿ ಅರೇಬಿಯಾ ಸೇರಿದಂತೆ 15 ಜಾಗತಿಕ ಮಾರುಕಟ್ಟೆಗಳಲ್ಲಿ ಲಭ್ಯ ಇದೆ. ಇನ್ನು ಭಾರತದಲ್ಲಿ ವರ್ಷಕ್ಕೆ 6,800 ರೂಪಾಯಿಗಳ ರಿಯಾಯಿತಿ ನೀಡಲಾಗುತ್ತಿದೆ. ಅಂದರೆ ತಿಂಗಳಿಗೆ ಸರಿಸುಮಾರು 566.67 ರೂಪಾಯಿ ಆಗುತ್ತದೆ.
ಇನ್ನು, ಇದರ ಜೊತೆಗೆ ಟ್ವಿಟರ್ 4,000 ಅಕ್ಷರಗಳ ದೀರ್ಘ ಟ್ವಿಟ್‌ಗಳನ್ನು ರಚಿಸಲು ಅನುಮತಿಸಲು ಪ್ರಾರಂಭಿಸಿದೆ. ಸದ್ಯ ಇದು ಅಮೆರಿಕದಲ್ಲಿ ಬ್ಲೂ ಸರ್ವಿಸ್ ಸಬ್‌ಸೈಬರ್ ಗಳಿಗೆ ಅನುಮತಿ ನೀಡಲಾಗಿದೆ. ಇದರ ಜೊತೆಯಲ್ಲೇ ಮತ್ತೊಂದು ಸಮಸ್ಯೆ ಎದುರಾಗಿದೆ. ಹೆಚ್ಚಿನ ಟ್ವೀಟ್ ಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರನ್ನು ಟ್ವಿಟ್ಟರ್ ಬಳಕೆದಾರರು ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನು ಬೇಗ ಸರಿಪಡಿಸಲಾಗುತ್ತದೆ ಎಂಬ ಭರವಸೆ ಕೂಡ ನೀಡಿದ್ದಾರೆ ಟ್ವಿಟರ್ ಸಪೋರ್ಟ್ ಟೀಂ.