ಭಾರತದಲ್ಲಿ ನೀರನ್ನು ಬಿಟ್ಟರೆ ಅತಿ ಹೆಚ್ಚು ಸೇವಿಸುವ ಪಾನೀಯವೆಂದರೆ ಚಹಾ. ಜನರು ಬೆಳಗ್ಗೆಯಿಂದ ಸಂಜೆಯವರೆಗೆ ನಾಲ್ಕಾರು ಕಪ್ ಚಹಾ ಸೇವಿಸ್ತಾರೆ. ಆದರೆ ಹೆಚ್ಚು ಹಾಲು ಮತ್ತು ಸಕ್ಕರೆಯೊಂದಿಗೆ ಚಹಾವನ್ನು ಕುಡಿಯುವುದರಿಂದ ಮಧುಮೇಹ ಮತ್ತು ಮಲಬದ್ಧತೆಯ ಅಪಾಯ ಹೆಚ್ಚಾಗುತ್ತದೆ. ಹಾಗಾಗಿಯೇ ಅನೇಕರು ಬ್ಲಾಕ್ ಟೀ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಈ ಬ್ಲಾಕ್ ಟೀ ಸೇವನೆ ಎಷ್ಟು ಸುರಕ್ಷಿತ ಅನ್ನೋದು ಅನೇಕರನ್ನು ಕಾಡುವ ಪ್ರಶ್ನೆ.
ಸಾಮಾನ್ಯವಾಗಿ ಬ್ಲಾಕ್ ಟೀಗೆ ನಿಂಬೆರಸ ಮತ್ತು ಜೇನುತುಪ್ಪ ಬೆರೆಸಲಾಗುತ್ತದೆ. ನಿಂಬೆ ವಿಟಮಿನ್ ಸಿಯ ಸಮೃದ್ಧ ಮೂಲವೆಂದು ಪರಿಗಣಿಸಲಾಗಿದೆ. ಆದರೆ ಬ್ಲಾಕ್ ಟೀಗೆ ನಿಂಬೆ ರಸ ಬೆರೆಸುವುದು ಅಪಾಯಕಾರಿ. ಮುಂಬೈ ನಿವಾಸಿಯೊಬ್ಬರಿಗೆ ಕಾಲುಗಳಲ್ಲಿ ಊತ ಪ್ರಾರಂಭವಾಯಿತು. ಜೊತೆಗೆ ವಾಂತಿ, ಹಸಿವಾಗದೇ ಇರುವುದು ಹೀಗೆ ಅನೇಕ ಸಮಸ್ಯೆಗಳಾದವು. ಪರೀಕ್ಷೆಯ ಬಳಿಕ ಅವರಿಗೆ ಕಿಡ್ನಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ದೃಢಪಟ್ಟಿತ್ತು.
ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಆತ ಬ್ಲಾಕ್ ಟೀಗೆ ನಿಂಬೆ ರಸ ಬೆರೆಸಿಕೊಂಡು ಕುಡಿಯುತ್ತಿದ್ದರು. ಇದರಿಂದಾಗಿ ಕಿಡ್ನಿಗೆ ಹಾನಿಯಾಗಿದೆ. ನಿಂಬೆ ರಸವನ್ನು ಬ್ಲಾಕ್ ಟೀಗೆ ಬೆರೆಸಿ ಸೇವನೆ ಮಾಡುವುದರಿಂದ ಕ್ರಿಯೇಟಿನೈನ್ ಹೆಚ್ಚಾಗಬಹುದು. ಅದರ ಮಟ್ಟವು ಸಾಮಾನ್ಯವಾಗಿ 1 ಕ್ಕಿಂತ ಕಡಿಮೆಯಿರಬೇಕು. ಮೂತ್ರಪಿಂಡದ ಕೆಲಸವೆಂದರೆ ದೇಹದ ದ್ರವಗಳಲ್ಲಿ ಇರುವ ಕೊಳೆಯನ್ನು ಶುದ್ಧೀಕರಿಸುವುದು.
ಕಿಡ್ನಿಗೆ ಸಮಸ್ಯೆಯಾದರೆ ಅದರ ಪರಿಣಾಮ ಇಡೀ ದೇಹದ ಮೇಲಾಗುತ್ತದೆ. ಯಾವುದನ್ನಾದರೂ ಅತಿಯಾಗಿ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕ. ಅದಕ್ಕಾಗಿಯೇ ವೈದ್ಯರನ್ನು ಸಂಪರ್ಕಿಸಿದ ನಂತರವಷ್ಟೇ ಇವನ್ನೆಲ್ಲ ಸೇವನೆ ಮಾಡಬೇಕು. ವಿಟಮಿನ್ ಸಿಯನ್ನು ಅತಿಯಾಗಿ ತೆಗೆದುಕೊಂಡರೆ ದೇಹದಲ್ಲಿ ಆಕ್ಸಲೇಟ್ ಪ್ರಮಾಣವು ಹೆಚ್ಚಾಗುತ್ತದೆ. ಇದು ಮೂತ್ರಪಿಂಡದ ಸೋಂಕನ್ನು ಉಂಟುಮಾಡಬಹುದು ಮತ್ತು ಮೂತ್ರಪಿಂಡ ವೈಫಲ್ಯಕ್ಕೂ ಕಾರಣವಾಗಬಹುದು.