ಸರಸ್ವತಿ ಎಲೆ ಎಂದೂ ಕರೆಯಲ್ಪಡುವ ಬ್ರಾಹ್ಮಿ ಅಥವಾ ಒಂದೆಲಗ ಆಹಾರವಾಗಿಯೂ ಬಳಕೆಯಾಗುವ ಒಂದು ಸಸ್ಯ. ಕರಾವಳಿಯ ತೋಟಗಳಲ್ಲಿ, ಗದ್ದೆಯ ಬದಿಗಳಲ್ಲಿ ಹೇರಳವಾಗಿ ಬೆಳೆಯುವ ಇದನ್ನು ಪಟ್ಟಣಗಳಲ್ಲಿ ಕೈದೋಟಗಳಲ್ಲಿ ಇಲ್ಲವೇ ಹೂದಾನಿಗಳಲ್ಲಿ ಬೆಳೆಸುತ್ತಾರೆ. ಹಲವಾರು ಔಷಧೀಯ ಗುಣಗಳುಳ್ಳ ಈ ಎಲೆಯನ್ನು ಬಳಸಿ ಪಲ್ಯ, ತಂಬುಳಿ, ಚಟ್ನಿ ತಯಾರಿಸುತ್ತಾರೆ.
ಮಕ್ಕಳು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಇದರ ವಿಶಿಷ್ಟ ರಾಸಾಯನಿಕ ಅಂಶಗಳು ಮೆದುಳಿನ ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಆಧಾರವಾಗಿದೆ. ನರರೋಗಗಳಿಗೆ ಇದನ್ನು ದಿವ್ಯೌಷಧ ಎಂದು ಆಯುರ್ವೇದದಲ್ಲಿ ಪರಿಗಣಿಸಲಾಗಿದೆ.
ಕೆಮ್ಮು, ಉಸಿರಾಟದ ತೊಂದರೆ ಇರುವವರು ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು. ಇದು ದೇಹಕ್ಕೆ ಹಾಗೂ ಮನಸ್ಸಿಗೆ ತಂಪು ನೀಡುತ್ತದೆ. ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ದಿನನಿತ್ಯ 4-5 ಎಲೆ ತಿನ್ನುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುತ್ತದೆ. ಮಲಬದ್ಧತೆ ಸಮಸ್ಯೆಯಿದ್ದರೆ ಒಂದೆಲಗ ಸೊಪ್ಪಿನ ಚಟ್ನಿ ಇಲ್ಲವೇ ತಂಬುಳಿ ಸೇವಿಸಬೇಕು. ಗರ್ಭಿಣಿಯರು ಇದರ ರಸ ತೆಗೆದು ಕುಡಿಯುವುದರಿಂದ ತಾಯಿಗೆ ಹಾಗೂ ಮಗುವಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಹೃದ್ರೋಗದಿಂದ ಬಳಲುವರು ಬ್ರಾಹ್ಮಿ ರಸವನ್ನು ನಿತ್ಯ ಸೇವಿಸುವುದರಿಂದ ಇದು ಹೃದಯಕ್ಕೆ ಟಾನಿಕ್ ನಂತೆ ಕೆಲಸ ಮಾಡುತ್ತದೆ. ಉರಿಮೂತ್ರ ಸಮಸ್ಯೆ ಇದ್ದವರು ಈ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಕುಡಿಯಬೇಕು. ದೀರ್ಘಕಾಲದ ತಲೆನೋವು ಕಡಿಮೆಯಾಗಲು ಎಳ್ಳೆಣ್ಣೆ ಬ್ರಾಹ್ಮೀ ತೈಲವನ್ನು ತಲೆಗೆ ಹಚ್ಚಿಕೊಳ್ಳಬೇಕು.