ಮುಂದಿನ ವರ್ಷದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶತಾಯಗಾತಯ ಅಧಿಕಾರವನ್ನು ಉಳಿಸಿಕೊಳ್ಳಲೇಬೇಕು ಎಂಬ ಪಣತೊಟ್ಟಿರುವ ಬಿಜೆಪಿ ಇದಕ್ಕಾಗಿ ಇನ್ನಿಲ್ಲದ ಹರಸಾಹಸ ಪಡುತ್ತಿದೆ.
ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸುವ ಸಲುವಾಗಿ ಸಮಿತಿಯನ್ನು ರಚನೆ ಮಾಡಿದೆ. ಮೂಲಗಳ ಪ್ರಕಾರ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಮತದಾರರನ್ನು ಓಲೈಸುವ ಸಲುವಾಗಿ ಪಕ್ಷದ ಪ್ರಚಾರವನ್ನು ನೋಡಿಕೊಳ್ಳಲು ಬಿಜೆಪಿ ಈ ಸಮುದಾಯವನ್ನು ರಚಿಸಿದೆ ಎನ್ನಲಾಗಿದೆ.
ಬ್ರಾಹ್ಮಣರ ಓಲೈಕೆಗಾಗಿ ಹೊಸದಾಗಿ ರಚನೆಯಾದ ಸಮಿತಿಯೊಂದಿಗೆ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಭೆ ನಡೆಸಿದರು. ಉತ್ತರ ಪ್ರದೇಶದ ಬಿಜೆಪಿ ಹಿರಿಯ ನಾಯಕರು ದೆಹಲಿಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿ ವಿಧಾನಸಭಾ ಚುನಾವಣೆಯ ತಯಾರಿ ಬಗ್ಗೆ ಚರ್ಚೆ ನಡೆಸಿದರು. ಹಾಗೂ ಸಭೆಯಲ್ಲಿ ಚುನಾವಣೆ ಪೂರ್ವತಯಾರಿಯ ನೀಲನಕ್ಷೆಯನ್ನು ಅಂತಿಮಗೊಳಿಸಲಾಯ್ತು.ಕೇಂದ್ರ ಸಚಿವ ಹಾಗೂ ಬಿಜೆಪಿ ಉತ್ತರ ಪ್ರದೇಶ ಚುನಾವಣಾ ಉಸ್ತುವಾರಿ ಧಮೇಂದ್ರ ಪ್ರಧಾನ್, ಶಿವ ಪ್ರತಾಪ್ ಶುಕ್ಲಾ, ಮಹೇಶ್ ಶರ್ಮಾ, ಬ್ರಿಜೇಶ್ ಪಾಠಕ್, ಶ್ರೀಕಾಂತ್ ಶರ್ಮಾ, ಆನಂದ ಸ್ವರೂಪ್ ಸಂಘಟನೆ ಸಚಿವ ಸುನೀಲ್ ಬನ್ಸಾಲ್ ಸೇರಿದಂತೆ ಅನೇಕರು ಸಭೆಯಲ್ಲಿ ಉಪಸ್ಥಿತರಿದ್ದರು.