ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕುರಿತಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಡಿರುವ ಮಾತು ಈಗ ವಾದ – ವಿವಾದಕ್ಕೆ ಕಾರಣವಾಗಿದೆ. ಕುಮಾರಸ್ವಾಮಿಯವರು ಬ್ರಾಹ್ಮಣ ಸಮುದಾಯಕ್ಕೆ ಅಪಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ.
ಇದರ ಮಧ್ಯೆ ಈ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿಯವರು, ನಾನು ರಾಜ್ಯದ ಬ್ರಾಹ್ಮಣ ಸಮುದಾಯವನ್ನು ನಿಂದಿಸಿಲ್ಲ. ಮರಾಠ ಪೇಶ್ವೆಗಳ ಡಿಎನ್ಎ ಇರುವ ವ್ಯಕ್ತಿಯನ್ನು ಆರ್ ಎಸ್ ಎಸ್ ಮತ್ತು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡಲು ಹೊರಟಿದೆ ಎಂದಷ್ಟೇ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೀಗ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು, ಈ ಬೆಳವಣಿಗೆ ಕುರಿತಂತೆ ಮಾತನಾಡಿದ್ದು, ಬ್ರಾಹ್ಮಣರು ಮುಖ್ಯಮಂತ್ರಿ ಆಗುವುದಾದರೆ ಆಗಲಿ. ಅವರೇಕೆ ಮುಖ್ಯಮಂತ್ರಿ ಆಗಬಾರದು. ಅವರು ಸಹ ಭಾರತೀಯ ಪ್ರಜೆಗಳಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮದ್ದೂರು ಪಟ್ಟಣದ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಸೋಮವಾರದಂದು ಭೇಟಿ ನೀಡಿದ್ದ ಅವರು ಬಳಿಕ ಮಾತನಾಡಿ, ಈ ಹಿಂದಿನಿಂದಲೂ ಬ್ರಾಹ್ಮಣ ಸಮುದಾಯದ ವಿರುದ್ಧ ಹೇಳಿಕೆಗಳು ಬರುತ್ತಿವೆ. ಚುನಾವಣೆ ಸಂದರ್ಭದಲ್ಲಿ ಇದು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.