ಮಳೆಗಾಲ ಆರಂಭವಾಗಿ ಇನ್ನೂ ಕೆಲವೇ ಕೆಲ ದಿನಗಳಾಗಿವೆ ಅಷ್ಟೆ. ಆಗಲೇ ಎಲ್ಲೆಲ್ಲೂ ಹಾಹಾಕಾರ ಸೃಷ್ಟಿಯಾಗಿ ಬಿಟ್ಟಿದೆ. ಅಬ್ಬರಿಸಿ ಬೊಬ್ಬರಿಯುತ್ತಿದ್ದ ಮಳೆಯ ಈ ರೌದ್ರರೂಪ ನೋಡಿ ಜನ ಕಂಗಾಲಾಗಿದ್ದಾರೆ. ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉಂಟಾಗುತ್ತಿರುವ ಅವಘಡಗಳು ಒಂದೆರಡಲ್ಲ.
ಇತ್ತೀಚೆಗೆ ಭಾರೀ ಮಳೆಯ ಪರಿಣಾಮ ಕಾರೊಂದು ಬ್ಯಾಲೆನ್ಸ್ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಉರುಳಿಬಿದ್ದಿದೆ. ಇದರ ಪರಿಣಾಮ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ವಿಟ್ಲದ ಧನುಷ್ ಹಾಗೂ ಕನ್ಯಾನ್ ಧನುಷ್ ನಾಪತ್ತೆಯಾಗಿದ್ದಾರೆ. ಇವರಿಬ್ಬರೂ ಸಹೋದರ ಸಂಬಂಧಿಗಳಾಗಿದ್ದು, ಇದೇ ಕಾರಿನಲ್ಲಿದ್ದ ಇನ್ನೋರ್ವನ ಗುರುತು ಇನ್ನೂ ಪತ್ತೆಯಾಗಿಲ್ಲ.
ಕಾರು ಸಂಪೂರ್ಣವಾಗಿ ಜಖಂ ಆಗಿದ್ದು, ಘಟನಾ ಸ್ಥಳದಿಂದ ಸುಮಾರು 500 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿರಬಹುದು ಅಂತ ಹೇಳಲಾಗುತ್ತಿದೆ.
ಸುರಿಯುತ್ತಿರುವ ಭಾರೀ ಮಳೆಯಲ್ಲೂ ವೇಗವಾಗಿ ಬಂದ ಕಾರು ಬ್ಯಾಲೆನ್ಸ್ ತಪ್ಪಿ ಪಕ್ಕದ ಹೊಳೆಗೆ ಬಿದ್ದಿದೆ. ಈ ಘಟನೆಯ ದೃಶ್ಯವು ಬೈತಡ್ಕ ಮಸೀದಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದೀಗ ನಾಪತ್ತೆಯಾದವರ ಬಗ್ಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.