ಬ್ಯಾಂಕ್ ಗ್ರಾಹಕರು ಗಮನಿಸಲೇಬೇಕಾದ ಸುದ್ದಿಯೊಂದಿದೆ. ಇನ್ಮೇಲೆ ನಿಮಗೆ ಬ್ಯಾಂಕ್ ವಹಿವಾಟನ್ನು ಮಾಡಲು 11 ಗಂಟೆ ಹೆಚ್ಚುವರಿ ಸಮಯ ಸಿಗುತ್ತದೆ. ಏಪ್ರಿಲ್ 18ರಿಂದ ಜಾರಿಗೆ ಬರುವಂತೆ ಆರ್ಬಿಐ ಬ್ಯಾಂಕ್ ಸಮಯವನ್ನು ಬದಲಾಯಿಸಿದೆ. ಸೋಮವಾರದಿಂದ ಇವತ್ತಿನಿಂದ ಬೆಳಗ್ಗೆ 9 ಗಂಟೆಗೇ ಬ್ಯಾಂಕ್ಗಳು ತೆರೆಯಲಿವೆ.
ಆದರೆ ಬ್ಯಾಂಕ್ಗಳು ಮುಚ್ಚುವ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬ್ಯಾಂಕ್ಗಳ ಕಾರ್ಯನಿರ್ವಹಣೆಗೆ ಇನ್ನೂ ಒಂದು ಗಂಟೆಯನ್ನು ಸೇರಿಸಲಾಗಿದೆ. ಕೊರೊನಾ ಕಾರಣಕ್ಕೆ ಬ್ಯಾಂಕ್ ವಹಿವಾಟಿನ ಸಮಯವನ್ನು ಈವರೆಗೆ ಕಡಿಮೆ ಮಾಡಲಾಗಿತ್ತು. ಆದ್ರೀಗ ಸೋಂಕು ಕಡಿಮೆಯಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಹಾಗಾಗಿ ಬ್ಯಾಂಕ್ಗಳನ್ನು 9 ಗಂಟೆಗೇ ತೆರೆಯಲು ಆರ್ಬಿಐ ನಿರ್ಧರಿಸಿದೆ.
ಬೇಗನೆ ಬ್ಯಾಂಕ್ ವಹಿವಾಟು ಆರಂಭವಾಗುವುದರಿಂದ ವಿದೇಶಿ ವಿನಿಮಯ ಮಾರುಕಟ್ಟೆ ಮತ್ತು ಸರ್ಕಾರಿ ಸೆಕ್ಯುರಿಟಿಗಳಲ್ಲಿನ ವಹಿವಾಟುಗಳು ಸಾಧ್ಯವಾಗುತ್ತವೆ. ಏಪ್ರಿಲ್ 18ರಿಂದ ಆರ್ಬಿಐ ನಿಯಂತ್ರಿತ ಮಾರುಕಟ್ಟೆಗಳಾದ ಫಾರೆಕ್ಸ್ ಉತ್ಪನ್ನಗಳು, ರೂಪಾಯಿ ಬಡ್ಡಿ ದರದ ಉತ್ಪನ್ನಗಳು, ಕಾರ್ಪೊರೇಟ್ ಬಾಂಡ್ಗಳಲ್ಲಿನ ರೆಪೊ, ವಿದೇಶಿ ವಿನಿಮಯ, ಭಾರತೀಯ ರೂಪಾಯಿ (ಐಎನ್ಆರ್) ವಹಿವಾಟುಗಳು ಬೆಳಗ್ಗೆ 10 ಗಂಟೆ ಬದಲು 9 ಗಂಟೆಗೆ ಆರಂಭವಾಗಲಿವೆ.
2020ರಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದಿದ್ದರಿಂದ ಮಾರುಕಟ್ಟೆಯ ವಹಿವಾಟಿನ ಸಮಯವನ್ನು ಆರ್ಬಿಐ ಬದಲಾಯಿಸಿತ್ತು. ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.30 ಕ್ಕೆ ಬದಲಾಯಿಸಲಾಗಿತ್ತು. ಈಗ ಆರ್ಬಿಐ ಹಳೆಯ ವೇಳಾಪಟ್ಟಿಯನ್ನು ಮತ್ತೆ ಜಾರಿಗೊಳಿಸುತ್ತಿದೆ.