ಬೆಲೆ ಬಾಳುವ ವಸ್ತುಗಳನ್ನು ಕಳ್ಳರಿಂದ ರಕ್ಷಿಸುವ ಸಲುವಾಗಿ ಗ್ರಾಹಕರು ಬ್ಯಾಂಕುಗಳಲ್ಲಿ ಲಾಕರ್ ತೆರೆದು ತಮ್ಮ ಆಭರಣ, ಪ್ರಮುಖ ದಾಖಲೆ ಪತ್ರಗಳನ್ನು ಇಟ್ಟಿರುತ್ತಾರೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಲಾಕರ್ ನಲ್ಲಿ ಇಟ್ಟ ಬೆಲೆಬಾಳುವ ವಸ್ತುಗಳೇ ನಾಪತ್ತೆಯಾಗಿರುವ ಅನೇಕ ನಿದರ್ಶನಗಳು ಕಂಡುಬಂದಿವೆ.
ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯೊಂದನ್ನು ಹೊರಡಿಸಿದ್ದು, ಲಾಕರ್ ನಲ್ಲಿ ಇಟ್ಟ ವಸ್ತುಗಳು ಕಣ್ಮರೆಯಾದ ಸಂದರ್ಭದಲ್ಲಿ ಸಂಬಂಧಪಟ್ಟ ಬ್ಯಾಂಕ್, ಲಾಕರ್ ಬಾಡಿಗೆಯ ನೂರು ಪಟ್ಟು ಪರಿಹಾರವನ್ನು ನೀಡಬೇಕಿದೆ. ಅಲ್ಲದೆ ಸಿಸಿ ಟಿವಿ ಅಳವಡಿಕೆ ಸೇರಿದಂತೆ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ.
ಲಾಕರ್ ತೆರೆದ ಸಂದರ್ಭದಲ್ಲಿ ಈ ಕುರಿತ ಮಾಹಿತಿ, ಗ್ರಾಹಕರ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಖಾತೆಗೆ ಸಂದೇಶ ರವಾನೆಯಾಗುವಂತೆ ನೋಡಿಕೊಳ್ಳಬೇಕಾಗಿದೆಯಲ್ಲದೆ ಕಾಲಕಾಲಕ್ಕೆ ಗ್ರಾಹಕರೊಂದಿಗೆ ಪರಿಶೀಲನೆ ನಡೆಸಬೇಕಾಗುತ್ತದೆ. ಜೊತೆಗೆ ಬ್ಯಾಂಕುಗಳಲ್ಲಿ ಖಾಲಿ ಇರುವ ಲಾಕರ್ ಗಳ ಮಾಹಿತಿಯನ್ನು ಕಾಲಕಾಲಕ್ಕೆ ಗ್ರಾಹಕರಿಗೆ ನೀಡಬೇಕಿದೆ.