ಕಟ್ಟಡ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಕಾರ್ಡ್ ಆರಂಭಿಸಿದ್ದು, ಆದರೆ ಕೆಲವರು ನಕಲಿ ದಾಖಲೆ ಸಲ್ಲಿಸಿ ಸೌಲಭ್ಯ ಪಡೆದಿರುವುದು ಪತ್ತೆಯಾಗಿದೆ.
ಈ ಹಿನ್ನಲೆಯಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಆದೇಶ ಒಂದನ್ನು ಹೊರಡಿಸಿದ್ದು, ಫೆಬ್ರವರಿ 23ರ ವರೆಗೆ ಬೋಗಸ್ ಕಾರ್ಡ್ ನೋಂದಣಿ ರದ್ದತಿ ಅಭಿಯಾನ ಕೈಗೊಳ್ಳುವಂತೆ ಕಾರ್ಮಿಕ ಇಲಾಖೆಗೆ ಸೂಚಿಸಿದೆ.
ಈ ಹಿನ್ನಲೆಯಲ್ಲಿ ನಕಲಿ ದಾಖಲೆ ನೀಡಿ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಪಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರು ತಮ್ಮ ಕಾರ್ಡುಗಳನ್ನು ಸ್ವಇಚ್ಚೆಯಿಂದ ಎಲ್ಲ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮೂಲ ಗುರುತಿನ ಚೀಟಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಇಲ್ಲವಾದಲ್ಲಿ ಕಾರ್ಮಿಕ ನಿರೀಕ್ಷಕರು ಖುದ್ದು ಸ್ಥಳ ಪರಿಶೀಲಿಸಿ, ನಕಲಿ ದಾಖಲೆ ಸೃಷ್ಟಿಸಿ ಗುರುತಿನ ಚೀಟಿ ಮತ್ತು ಸೌಲಭ್ಯ ಪಡೆದ ಫಲಾನುಭವಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.