ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಖ್ಯಾತ ನಟ ಕಿಚ್ಚ ಸುದೀಪ್, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಶಿಗ್ಗಾಂವಿಯಲ್ಲಿ ಅವರೊಂದಿಗೆ ರೋಡ್ ಶೋ ದಲ್ಲಿ ಕಾಣಿಸಿಕೊಂಡ ಸುದೀಪ್ ಅದಾದ ಬಳಿಕ ಮೊಳಕಾಲ್ಮೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ
ಇದರ ಮಧ್ಯೆ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಕಿಚ್ಚ ಸುದೀಪ್, ಬೊಮ್ಮಾಯಿಯವರು ಸರ್ಕಾರ ನಡೆಸುತ್ತಿದ್ದಾರೆ. ಜೊತೆಗೆ ಜನಸೇವೆ ಮಾಡುತ್ತಿದ್ದಾರೆ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಬೊಮ್ಮಾಯಿ ಯಾವ ಕ್ಷೇತ್ರದಲ್ಲಿ ಪ್ರಚಾರ ಮಾಡಲು ಹೇಳುತ್ತಾರೋ ಅಲ್ಲಿಗೆ ಹೋಗುವುದಾಗಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಗೀತಕ್ಕ ಯಾವಾಗಲೂ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಅವರಿಗೆ ಆಲ್ ದ ಬೆಸ್ಟ್ ಎಂದಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಪ್ರಚಾರದ ನಡುವೆ ವ್ಯತ್ಯಾಸ ಇಲ್ಲ ಎಂದು ಸುದೀಪ್ ಸದ್ಯಕ್ಕೆ ನಾನು ಸಿನಿಮಾ ಕ್ಷೇತ್ರದತ್ತ ಮಾತ್ರ ಗಮನ ಹರಿಸುತ್ತೇನೆ ಎಂದಿದ್ದಾರೆ.