ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭ್ರಷ್ಟ ಲಿಂಗಾಯಿತ ಮುಖ್ಯಮಂತ್ರಿ ಎಂಬ ಹೇಳಿಕೆ ಈಗ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದರ ಮಧ್ಯೆ ಶಿವಮೊಗ್ಗದಲ್ಲಿ ಮಾತನಾಡಿರುವ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯರವರನ್ನು ಟೀಕಿಸುವ ಭರದಲ್ಲಿ ಬಾಯಿ ತಪ್ಪಿ ಬೊಮ್ಮಾಯಿ ಅವರನ್ನು ಭ್ರಷ್ಟ ಅನ್ನಬೇಕಿತ್ತು ಎಂದಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯನವರು ಬೊಮ್ಮಾಯಿ ಭ್ರಷ್ಟ ಅನ್ನಬೇಕಿತ್ತು. ಅದನ್ನು ಬಿಟ್ಟು ಲಿಂಗಾಯಿತ ಸಿಎಂ ಭ್ರಷ್ಟರು ಅಂತ ಹೇಳಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಅವರ ಈ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.
ಈ ಹಿಂದೆ ಮಾತನಾಡಿದ್ದ ಸಿದ್ದರಾಮಯ್ಯ ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸುವ ವೇಳೆ ಭ್ರಷ್ಟ ಲಿಂಗಾಯತ ಸಿಎಂ ಎಂದು ಹೇಳಿದ್ದು ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಸ್ಪಷ್ಟನೆ ನೀಡಿ, ನಾನು ಬೊಮ್ಮಾಯಿ ಭ್ರಷ್ಟ ಸಿಎಂ ಎಂದು ಹೇಳಿದ್ದೆ. ಅದನ್ನು ಬಿಟ್ಟು ಲಿಂಗಾಯತ ಸಿಎಂ ಭ್ರಷ್ಟರು ಅಂತ ಹೇಳಿಲ್ಲ. ಈ ಹಿಂದೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಎಚ್. ಪಟೇಲ್ ಮೊದಲಾದ ನಾಯಕರು ಮುಖ್ಯಮಂತ್ರಿಗಳಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದ್ದರು.