ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಳೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದ್ದು, ಇತ್ತೀಚಿಗಿನ ಚುನಾವಣಾ ಪ್ರಚಾರದ ವೇಳೆ ರೋಡ್ ಶೋ ಮಾಡುವಾಗ ಕಲ್ಲು ತೂರಾಟ ನಡೆದಿದ್ದು, ಅವರ ಕಣ್ಣಿಗೆ ಗಾಯವಾಗಿದೆ ಎಂಬ ಸುಳ್ಳು ಸುದ್ದಿಯನ್ನು ಹರಡಿಸಲಾಗುತ್ತಿದೆ.
ಈ ಕುರಿತಂತೆ ಶಿಗ್ಗಾಂವಿಯಲ್ಲಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಇದು ಸಂಪೂರ್ಣ ಸುಳ್ಳು ಸುದ್ದಿ. ನಾನು 2018ರಲ್ಲಿ ಬೆಳೆ ವಿಮೆ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಣ್ಣಿಗೆ ಏಟು ತಗುಲಿದ್ದು, ಇದನ್ನು ಇತ್ತೀಚೆಗೆ ನಡೆದ ಘಟನೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನವರು ಇಂತಹ ಕೃತ್ಯದಲ್ಲಿ ತೊಡಗಿಕೊಂಡಿದ್ದು, ಈ ಮೊದಲು ಬಿ.ಎಲ್. ಸಂತೋಷ್, ಲಿಂಗಾಯಿತರ ಕುರಿತು ಯಾವುದೇ ಹೇಳಿಕೆ ನೀಡದಿದ್ದರೂ ಸಹ ಅವರೇ ಹೇಳಿದ್ದಾರೆ ಎಂಬಂತೆ ಬಿಂಬಿಸಿದ್ದರು. ಇದೀಗ ನನ್ನ ಹಳೆ ವಿಡಿಯೋ ವೈರಲ್ ಮಾಡಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು.