ವೇಗವಾಗಿ ಚಲಿಸ್ತಾ ಇರೋ ಬೈಕ್ ಮತ್ತು ಕಾರುಗಳನ್ನು ನಾಯಿಗಳು ಬೆನ್ನಟ್ಟಿ ಬರುವುದನ್ನು ನೀವು ಕೂಡ ಗಮನಿಸಿರಬಹುದು. ನಾಯಿಗಳು ಜೋರಾಗಿ ಬೊಗಳುತ್ತ ವಾಹನದ ಹಿಂದೆ ಓಡೋಡಿ ಬರುತ್ತವೆ. ಇದರಿಂದ ಚಾಲಕ ಬೆದರಿ ಅಪಘಾತ ಕೂಡ ಸಂಭವಿಸುವ ಸಾಧ್ಯತೆಯಿರುತ್ತದೆ.
ಆದರೆ ನಾಯಿಗಳ ಈ ವರ್ತನೆಗೆ ಕಾರಣವೇನು ಅನ್ನೋದು ತಿಳಿದಿದೆಯೇ? ಮನುಷ್ಯರಿಗೆ ನಿಷ್ಠಾವಂತ ಮತ್ತು ಸ್ನೇಹಪರ ಎಂದು ಪರಿಗಣಿಸಲಾದ ನಾಯಿಗಳು ಇದ್ದಕ್ಕಿದ್ದಂತೆ ವಾಹನ ಪ್ರಯಾಣಿಕರಿಗೆ ಹೇಗೆ ಬದ್ಧವೈರಿಗಳಾಗಿ ಬದಲಾಗುತ್ತವೆ ಅನ್ನೋದು ಇಂಟ್ರೆಸ್ಟಿಂಗ್ ಸಂಗತಿ.
ಶ್ವಾನ ತಜ್ಞರ ಪ್ರಕಾರ, ನಾಯಿಗಳ ದ್ವೇಷವು ಮನುಷ್ಯರು ಅಥವಾ ವಾಹನಗಳ ಮೇಲಲ್ಲ. ಕಾರು ಅಥವಾ ಬೈಕ್‌ನ ಟೈರ್‌ಗಳ ಇತರ ನಾಯಿಗಳು ಮೂತ್ರ ಮಾಡಿರುತ್ತವೆ. ಆ ವಾಸನೆಯನ್ನು ಬೆನ್ನಟ್ಟಿ ನಾಯಿಗಳು ಓಡೋಡಿ ಬರುತ್ತವೆ. ಶ್ವಾನಗಳು ತಕ್ಷಣವೇ ಮತ್ತೊಂದು ನಾಯಿಯ ವಾಸನೆಯನ್ನು ಗುರುತಿಸುತ್ತವೆ. ಬೇರೆ ನಾಯಿಯ ವಾಸನೆ ಬರುತ್ತಿದ್ದಂತೆ ಕಾರಿನ ಹಿಂದೆ ಬೊಗಳುತ್ತಾ ಓಡಲು ಪ್ರಾರಂಭಿಸುತ್ತವೆ.
ಕಾಲೋನಿಯಲ್ಲಿ ಹೊಸ ನಾಯಿ ಬಂದರೆ ಇಡೀ ಕಾಲೋನಿಯ ನಾಯಿಗಳು ಒಟ್ಟುಗೂಡಿ ಅದನ್ನು ಓಡಿಸುತ್ತವೆ. ಕಾರಣ ನಾಯಿಗಳು ತಮ್ಮದೇ ಆದ ಪ್ರದೇಶವನ್ನು ಹೊಂದಿವೆ. ಇದರಲ್ಲಿ ಅವರು ಬೇರೆ ಯಾವುದೇ ನಾಯಿಯನ್ನು ನೋಡಲು ಇಷ್ಟಪಡುವುದಿಲ್ಲ. ಅದೇ ರೀತಿ ಕಾರು, ಬೈಕಿನ ಟೈರ್‌ನಿಂದ ಇನ್ನೊಂದು ನಾಯಿಯ ವಾಸನೆ ಬಂದರೆ ತಮ್ಮ ಏರಿಯಾಗೆ ಹೊಸ ನಾಯಿ ಬಂದ ಅನುಭವವಾಗುತ್ತದೆ. ಅದಕ್ಕಾಗಿಯೇ ಅವು ವಾಹನವನ್ನು ಚೇಸ್ ಮಾಡುತ್ತವೆ.
ಕಾರಿನ ತಿರುಗುವ ಟೈರ್‌ಗಳಿಂದ ಹೊಸ ನಾಯಿಗಳು ತಮ್ಮ ಮೇಲೆ ದಾಳಿ ಮಾಡಲು ಸಿದ್ಧವಾಗುತ್ತಿವೆ ಎಂದು ನಾಯಿಗಳು ಭಾವಿಸುತ್ತವೆ. ಅನೇಕರು ನಾಯಿ ಬೊಗಳುತ್ತ ಓಡಿ ಬರುವುದನ್ನು ನೋಡಿ ವಾಹನದ ವೇಗವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಇದರಿಂದಾಗಿ ನಾಯಿಗಳ ಅನುಮಾನವು ಆತ್ಮವಿಶ್ವಾಸಕ್ಕೆ ತಿರುಗುತ್ತದೆ ಮತ್ತು ಅವು ಇನ್ನಷ್ಟು ಆಕ್ರಮಣಕಾರಿಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಉದ್ವೇಗಕ್ಕೆ ಒಳಗಾಗದೇ ಇರುವುದು ಜಾಣತನ ಎನ್ನುತ್ತಾರೆ ತಜ್ಞರು.