ನೀವೇನಾದ್ರೂ ಹೊಸ ಕಾರು ಅಥವಾ ಬೈಕ್ ಖರೀದಿ ಮಾಡುವ ಯೋಚನೆಯಲ್ಲಿದ್ರೆ ಜೂನ್ 1ರಿಂದ ಇವೆಲ್ಲವೂ ಮತ್ತಷ್ಟು ದುಬಾರಿಯಾಗಲಿವೆ. ಯಾಕಂದ್ರೆ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯ ಮೂರನೇ ವ್ಯಕ್ತಿಯ ವಿಮೆಯ ವೆಚ್ಚವನ್ನು ಹೆಚ್ಚಿಸಲು ನಿರ್ಧರಿಸಿದೆ. ಇದರಿಂದಾಗಿ ದೇಶಾದ್ಯಂತ ಹೊಸ ವಾಹನಗಳ ಖರೀದಿ ದುಬಾರಿಯಾಗಲಿದೆ. ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರೀಮಿಯಂ ಮೊತ್ತವನ್ನು ಕೇಂದ್ರ ಹೆಚ್ಚಳ ಮಾಡಿದೆ.
2019-20 ರಲ್ಲಿ 1,000 ಸಿಸಿ ಎಂಜಿನ್ ಸಾಮರ್ಥ್ಯದ ಖಾಸಗಿ ಕಾರುಗಳ ಪ್ರೀಮಿಯಂ 2,072 ರೂಪಾಯಿ ಇತ್ತು. ಈ ಮೊತ್ತ 2,094 ರೂಪಾಯಿಗೆ ಏರಿಕೆ ಆಗಲಿದೆ. 3221 ರೂಪಾಯಿ ಇದ್ದ 1000-1500 ಸಿಸಿ ಎಂಜಿನ್ ಸಾಮರ್ಥ್ಯದ ಕಾರುಗಳ ಪ್ರೀಮಿಯಂ 3,416 ರೂಪಾಯಿಗೆ ಏರಿಕೆಯಾಗಲಿದೆ. ಆದ್ರೆ 1500 ಸಿಸಿಗಿಂತಲೂ ಅಧಿಕ ಸಾಮರ್ಥ್ಯದ ಎಂಜಿನ್ ಹೊಂದಿರೋ ಕಾರುಗಳ ಪ್ರೀಮಿಯಂ 7897 ರೂಪಾಯಿಯಿಂದ 7890 ರೂಪಾಯಿಗೆ ಇಳಿಕೆ ಆಗಲಿದೆ.
150-350 ಸಿಸಿವರೆಗಿನ ಬೈಕ್‌ಗಳ ಪ್ರೀಮಿಯಂ ಅನ್ನು 1,366 ರೂಪಾಯಿಗೆ ನಿಗದಿಪಡಿಸಲಾಗಿದೆ. 350 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್‌ಗಳ ಪ್ರೀಮಿಯಂ ಅನ್ನು 2,804 ರೂಪಾಯಿಗೆ ನಿಗದಿ ಮಾಡಲಾಗಿದೆ. ಈ ಬಗ್ಗೆ ಸಚಿವಾಲಯದಿಂದ ಅಧಿಕೃತ ಅಧಿಸೂಚನೆಯೇ ಹೊರಬಿದ್ದಿದೆ. ಹೈಬ್ರಿಡ್ ಎಲೆಕ್ಟ್ರಿಕಲ್ ವಾಹನಗಳಿಗೆ ಸಚಿವಾಲಯ ಶೇ.7.5ರಷ್ಟು ರಿಯಾಯಿತಿಯನ್ನು ಘೋಷಣೆ ಮಾಡಿದೆ.
30 ಕಿಲೋ ವ್ಯಾಟ್ ಸಾಮರ್ಥ್ಯದ ಎಲೆಕ್ಟ್ರಿಕ್ ಕಾರುಗಳ ಪ್ರೀಮಿಯಂ 1,780 ರೂಪಾಯಿ ಇರಲಿದ್ದು, 30 ಕಿಲೋ ವ್ಯಾಟ್‌ಗಿಂತ ಅಧಿಕ ಹಾಗೂ 65 ಕಿಲೋ ವ್ಯಾಟ್‌ಗಿಂತ ಕಡಿಮೆ ಸಾಮರ್ಥ್ಯದ ಕಾರುಗಳ ಪ್ರೀಮಿಯಂ ಅನ್ನು 2904 ರೂಪಾಯಿಗೆ ನಿಗದಿಪಡಿಸಲಾಗಿದೆ. 12,000-20,000 ಕೆಜಿ ತೂಕದ ವಾಣಿಜ್ಯ ವಾಹನಗಳ ಪರಿಷ್ಕೃತ ಪ್ರೀಮಿಯಂ 35,313 ರೂಪಾಯಿ ಆಗಿದೆ. 40,000 ಕೆಜಿಗಿಂತ ಹೆಚ್ಚಿನ ತೂಕದ ವಾಣಿಜ್ಯ ವಾಹನಗಳ ಪ್ರೀಮಿಯಂ 41,561 ರೂಪಾಯಿಯಿಂದ 44,242 ರೂಪಾಯಿಗೆ ಹೆಚ್ಚಳವಾಗಿದೆ.