ಕೆಲವರಿಗೆ ಊಟಕ್ಕೆ ಮೊಸರು ಇರಲೇಬೇಕು. ಮೊಸರಿಲ್ಲದಿದ್ದರೆ ಊಟವೇ ಸೇರದವರು ತುಂಬಾ ಜನ ಇದ್ದಾರೆ. ಈಗ ಬೇಸಿಗೆಕಾಲ ತನ್ನ ಇರುವು ತೋರಿಸಲು ಶುರು ಮಾಡಿಬಿಟ್ಟಿದೆ.
ದೇಹಕ್ಕೆ ಆದಷ್ಟು ತಂಪು ಪದಾರ್ಥಗಳ ಸೇವನೆ ಮಾಡಿದರೆ ಒಳ್ಳೆಯದು. ಹಾಗಾಗಿ ಬರೀ ಮೊಸರು ಸೇವಿಸುವುದಕ್ಕಿಂತ ಇದರಲ್ಲಿ ರುಚಿಯಾದ ಸೌತೆಕಾಯಿ ರಾಯತ ಮಾಡಿಕೊಂಡು ಸವಿಯಬಹುದು ಮಾಡುವ ವಿಧಾನ ಕೂಡ ಸುಲಭವಿದೆ.
1 ಕಪ್ ಸೌತೆಕಾಯಿ ತುರಿ. ಅಥವಾ ಚಿಕ್ಕದ್ದಾಗಿ ಕತ್ತರಿಸಿಕೊಂಡ ಸೌತೆಕಾಯಿ, ಜೀರಿಗೆ ½ ಟೀ ಸ್ಪೂನ್, 1ಕಪ್ ಮೊಸರು, ಸ್ವಲ್ಪ ಕೊತ್ತಂಬರಿಸೊಪ್ಪು ಅಥವಾ ಪುದೀನಾ ಸೊಪ್ಪು. ಸಣ್ಣಗೆ ಹಚ್ಚಿಟ್ಟುಕೊಂಡಿದ್ದು. 1-ಹಸಿಮೆಣಸು, 1 ಟೀ ಸ್ಪೂನ್ ಶುಂಠಿ ರಸ. ಚಿಟಿಕೆ ಕಾಳುಮೆಣಸಿನ ಪುಡಿ.
ಮೊದಲಿಗೆ ½ ಟೀ ಸ್ಪೂನ್ ಜೀರಿಗೆಯನ್ನು ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ನಂತರ ಸೌತೆಕಾಯಿಯನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಒಂದು ಬೌಲ್ ಗೆ ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಉಪ್ಪು, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಶುಂಠಿ ರಸ ಸೇರಿಸಿ ಆಮೇಲೆ ಸೌತೆಕಾಯಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಗೆ ಕಾಳುಮೆಣಸಿನ ಪುಡಿಯನ್ನು ಮೇಲೆ ಹಾಕಿದರೆ ರುಚಿಕರವಾದ ಸೌತೆಕಾಯಿ ರಾಯತಾ ಸವಿಯಲು ಸಿದ್ಧ.
ತೂಕ ಕಡಿಮೆ ಮಾಡಿಕೊಳ್ಳಬೇಕೆನ್ನುವವರು ಕೂಡ ಇದನ್ನು ಸವಿಯಬಹುದು. ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಹೊಟ್ಟೆ ಕೂಡ ತುಂಬಿದ ಹಾಗೇ ಆಗುತ್ತದೆ.