ನೀರಿಲ್ಲದೆ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ದೇಹದ ಪ್ರತಿ ಭಾಗಕ್ಕೂ ಆಮ್ಲಜನಕ ಮತ್ತು ಇತರ ಪೋಷಕಾಂಶಗಳನ್ನು ಸಾಗಿಸುವುದು ನೀರಿನ ಕೆಲಸ. ದೇಹದ ಉಷ್ಣತೆಯನ್ನು ನಿಯಂತ್ರಿಸುವ ನೀರು, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮೂತ್ರ, ಬೆವರು ಅಥವಾ ಮಲ ರೂಪದಲ್ಲಿ ದೇಹದಿಂದ ತ್ಯಾಜ್ಯವನ್ನು ಹೊರಹಾಕಲು ನೆರವಾಗುತ್ತದೆ.
ಚೆನ್ನಾಗಿ ನೀರು ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ನಿಮ್ಮ ದೇಹದ ಶಕ್ತಿ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಜೀವಜಲ ಬೇಕೇ ಬೇಕು. ಸಾಕಷ್ಟು ನೀರು ಕುಡಿಯುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಒತ್ತಡ ಮತ್ತು ಸೋಂಕುಗಳಿಂದ ಪಾರಾಗಬಹುದು. ಪ್ರತಿದಿನ ಸಾಕಷ್ಟು ನೀರು ಕುಡಿಯದೇ ಇದ್ದರೆ ನೀವು ಡಿಹೈಡ್ರೇಶನ್ ನಿಂದ ಬಳಲಬಹುದು.
ನೀವು ಡಿ ಹೈಡ್ರೇಟ್ ಆಗಿದ್ದೀರಾ? ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು ನೀರು ಪೂರೈಕೆಯಾಗುತ್ತಿಲ್ವಾ ಎಂಬುದನ್ನು ಸಹ ತಿಳಿದುಕೊಳ್ಳಬೇಕು. ಡಿಹೈಡ್ರೇಶನ್ ಆಗಿದ್ದರೆ ಅದನ್ನು ಸರಿದೂಗಿಸಲು ಚೆನ್ನಾಗಿ ನೀರು ಕುಡಿಯುವುದರ ಜೊತೆಗೆ ಸೌತೆಕಾಯಿ, ಕಲ್ಲಂಗಡಿ, ಲೆಟಸ್, ಸೆಲರಿ, ದ್ರಾಕ್ಷಿ, ಕಿತ್ತಳೆ, ಬೆಲ್ ಪೆಪರ್, ಕೋಸುಗಡ್ಡೆ ಮತ್ತು ಟೊಮೆಟೊಗಳಂತಹ ಹೆಚ್ಚಿನ ನೀರಿನಂಶವಿರುವ ಆಹಾರಗಳನ್ನು ತಿನ್ನಬೇಕು.
ಬಿಸಲು ಮತ್ತು ಸೆಖೆ ಜಾಸ್ತಿ ಇರುವಾಗ ಬೆವರುವುದು ಸಹಜ. ಈ ಕಾರ್ಯವಿಧಾನದ ಮೂಲಕ ದೇಹವು ತನ್ನ ತಾಪಮಾನವನ್ನು ನಿಯಂತ್ರಿಸುತ್ತದೆ. ನಿಮಗೇನಾದ್ರೂ ಡಿಹೈಡ್ರೇಶನ್ ಆಗಿದ್ದರೆ ದೇಹ ಬೆವರುವುದಿಲ್ಲ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದರೆ ಹೃದಯ ಬಡಿತ ಜಾಸ್ತಿಯಾಗುತ್ತದೆ.
ನಿಮ್ಮ ದೇಹಕ್ಕೆ ನೀರಿನ ಅಗತ್ಯ ಎಷ್ಟಿದೆ ಅನ್ನೋದನ್ನು ನಿಮ್ಮ ಚರ್ಮವೇ ಸೂಚಿಸುತ್ತದೆ. ಕಡಿಮೆ ನೀರು ಕುಡಿದರೆ ಚರ್ಮವು ಶುಷ್ಕವಾಗಿ ಹೋಗುತ್ತದೆ. ತುರಿಕೆ ಕಾಣಿಸಿಕೊಳ್ಳಬಹುದು, ಚರ್ಮದ ಮೇಲಿಂದ ಸಿಪ್ಪೆಗಳು ಏಳಬಹುದು. ಬೇಸಿಗೆಯಲ್ಲಿ ಮಾತ್ರವಲ್ಲ, ಎಲ್ಲಾ ಕಾಲದಲ್ಲೂ ನಿಯಮಿತವಾಗಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.