ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವ ಹೊಣೆ ನಿಮ್ಮದೇ ಹೊರತು ಬೇರೆಯವರದ್ದಲ್ಲ. ಹಾಗಾಗಿ ನೀವು ಎಷ್ಟು ಮತ್ತು ಹೇಗೆ ಅಂದವಾಗಿ ಕಾಣಬೇಕು ಎಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ಅದಕ್ಕಾಗಿ ಕೆಲವು ಟಿಪ್ಸ್ ಗಳು ಇಲ್ಲಿವೆ.
ಬೇಸಗೆಯ ಬಿಸಿಗೆ ಕಚೇರಿಯಲ್ಲೂ ಬಾಡಿ ಮನೆಗೆ ಬರುವಾಗ ಬಸವಳಿದಿರುವುದು ಸಹಜ. ಅದಕ್ಕಾಗಿ ಮತ್ತೆ ಚೈತನ್ಯ ಪಡೆಯಲು ನಿಂಬೆ ಜ್ಯೂಸ್ ಮಾಡಿ ಕುಡಿಯಿರಿ. ನಿಂಬೆ ರಸಕ್ಕೆ ಸಕ್ಕರೆಯೊಂದಿಗೆ ಚಿಟಿಕೆ ಉಪ್ಪನ್ನೂ ಬೆರೆಸಿ. ಇದು ಆಯಾಸವನ್ನು ಕಡಿಮೆ ಮಾಡಿ ಮನಸ್ಸಿಗೂ ದೇಹಕ್ಕೂ ಉಲ್ಲಾಸವನ್ನು ನೀಡುತ್ತದೆ.
ಜೋರು ಸೆಖೆಯೆಂದು ಯಾವುದೇ ಹಣ್ಣನ್ನು ಮಿಕ್ಸಿಗೆ ಹಾಕಿ ರುಬ್ಬಿ ಸಕ್ಕರೆ ಬೆರೆಸಿ ಜ್ಯೂಸ್ ತಯಾರಿಸದಿರಿ. ಇದರಿಂದ ಕುಡಿಯಲು ರುಚಿಯಾಗುತ್ತದಷ್ಟೇ, ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ. ಅದರ ಬದಲು ಫ್ರಿಜ್ ನಲ್ಲಿಟ್ಟ ತಂಪಾದ ಹಣ್ಣುಗಳನ್ನು ಸವಿಯಿರಿ. ಅದು ತಂಪಾದ ಅನುಭವದೊಂದಿಗೆ ಸಹಜ ರುಚಿಯನ್ನೂ ಕೊಡುತ್ತದೆ. ಸಕ್ಕರೆ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ.
ಹಸಿ ತರಕಾರಿಗಳನ್ನು ಹೆಚ್ಚು ಸೇವಿಸಿ. ಮುಳ್ಳುಸೌತೆ ತಿನ್ನುವುದರಿಂದ ದೇಹ ನಿರ್ಜಲೀಕರಣಗೊಳ್ಳುವುದಿಲ್ಲ. ಇದರಿಂದ ವಿಪರೀತ ಬಾಯಾರಿಕೆಯೂ ಕಡಿಮೆಯಾಗುತ್ತದೆ.