ಬೇಸಿಗೆಯಲ್ಲಿ ಸೌತೆಕಾಯಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ 29-03-2023 7:30AM IST / No Comments / Posted In: Latest News, Health, Live News, Life Style ಬೇಸಿಗೆ ಬಿಸಿಲ ಝಳ ದಿನ ದಿನಕ್ಕೂ ಜಾಸ್ತಿಯಾಗ್ತಿದೆ. ಸೆಕೆಗೆ ಜನ ಹಣ್ಣಾಗ್ತಿದ್ದಾರೆ. ಸುಸ್ತು, ಆಯಾಸ ಜೊತೆಗೆ ನಾನಾ ಖಾಯಿಲೆಗಳು ಮನುಷ್ಯನನ್ನು ಆವರಿಸ್ತಾ ಇವೆ. ಇಂತ ಸಮಯದಲ್ಲಿ ಪೌಷ್ಠಿಕಾಂಶವಿರುವ, ದೇಹಕ್ಕೆ ಅಗತ್ಯವಿರುವ ನೀರನ್ನು ನೀಡುವ ಆಹಾರ ಪದಾರ್ಥ ಸೇವನೆ ಒಳ್ಳೆಯದು. ಬೇಸಿಗೆಯಲ್ಲಿ ಸೌತೆಕಾಯಿ ಸೇವನೆ ಹೇಳಿ ಮಾಡಿಸಿರುವಂತಹದ್ದು. ಬೇಸಿಗೆಯಲ್ಲಿ ಸೌತೆಕಾಯಿ ಸಲಾಡ್ ಸೇವನೆ ಮಾಡಬೇಕು. ವಿಟಮಿನ್ ಎ, ಬಿ 1, ಬಿ 6, ಸಿ, ಪೊಟ್ಯಾಸಿಯಮ್, ಫಾಸ್ಫರಸ್, ಕಬ್ಬಿಣ ಅಂಶಗಳು ಇದರಲ್ಲಿದ್ದು, ಆರೋಗ್ಯ ಕಾಪಾಡಿಕೊಳ್ಳಲು ಸೌತೆಕಾಯಿ ನೆರವಾಗುತ್ತದೆ. ಪ್ರತಿದಿನ ಇದರ ಸೇವನೆಯಿಂದ ಅನೇಕ ಉಪಯೋಗಗಳಿವೆ. ನೀರಿನ ಕೊರತೆ ಪರಿಹರಿಸುತ್ತದೆ: ಬೇಸಿಗೆಯಲ್ಲಿ ನಮ್ಮ ದೇಹದ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಪ್ರತಿದಿನ ಸೌತೆಕಾಯಿ ಸೇವನೆ ಮಾಡಿದ್ರೆ ದೇಹಕ್ಕೆ ಬೇಕಾದ ನೀರಿನಾಂಶವನ್ನು ಇದು ಒದಗಿಸುತ್ತದೆ. ಇದ್ರಲ್ಲಿ ನೀರಿನಂಶ ಜಾಸ್ತಿ ಇರುವುದರಿಂದ ದೇಹದಲ್ಲಿರುವ ಕೊಳಕನ್ನು ಕೂಡ ಇದು ಹೋಗಲಾಡಿಸುತ್ತದೆ. ಮಲಬದ್ಧತೆ: ಬೇಸಿಗೆಯಲ್ಲಿ ಮಲಬದ್ಧತೆ ಸಮಸ್ಯೆ ಅನೇಕರನ್ನು ಕಾಡುತ್ತದೆ. ಊರಿಯೂತ, ಶರೀರದಲ್ಲಿ ಉರಿ ಕಂಡು ಬಂದರೆ ಸೌತೆಕಾಯಿ ಸೇವನೆ ಒಳ್ಳೆಯದು. ತಲೆನೋವು ಹಾಗೂ ಆಲಸ್ಯ : ಸೌತೆಕಾಯಿಯಲ್ಲಿ ವಿಟಮಿನ್ ಬಿ, ಸಕ್ಕರೆ ಹಾಗೂ ಎಲೆಕ್ಟ್ರೋಲೈಟ್ ಅಂಶವಿರುತ್ತದೆ. ಇದು ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ತಲೆ ನೋವು ಅಥವಾ ಆಲಸ್ಯ ಕಾಣಿಸಿಕೊಳ್ಳುತ್ತಿದ್ದರೆ ರಾತ್ರಿ ಮಲಗುವ ಮುನ್ನ ಸೌತೆಕಾಯಿ ತಿಂದು ಮಲಗಿರಿ. ಆಮ್ಲದ ಮಟ್ಟ: ಪ್ರತಿದಿನ ಸೌತೆಕಾಯಿ ಸೇವನೆ ಮಾಡುವುದರಿಂದ ದೇಹದಲ್ಲಿರುವ ಯೂರಿಕ್ ಆಮ್ಲದ ಮಟ್ಟ ನಿಯಂತ್ರಣದಲ್ಲಿರುತ್ತದೆ. ಕೀಲು ನೋವು: ಕೀಲು ನೋವಿನಿಂದ ಬಳಲುತ್ತಿದ್ದವರು ಸೌತೆಕಾಯಿಯನ್ನು ಹೆಚ್ಚಾಗಿ ಉಪಯೋಗಿಸಬೇಕು. ಸೌತೆಕಾಯಿ ಜೊತೆ ಕ್ಯಾರೆಟ್ ಜ್ಯೂಸ್ ಮಿಕ್ಸ್ ಮಾಡಿ ಕುಡಿಯುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ. ದೇಹದ ತಾಪಮಾನ ನಿಯಂತ್ರಣ : ಬೇಸಿಗೆಯಲ್ಲಿ ದೇಹದ ತಾಪಮಾನದಲ್ಲಿ ಏರುಪೇರಾಗುತ್ತದೆ. ಇದರಿಂದ ಪದೇ ಪದೇ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಸೌತೆಕಾಯಿಯನ್ನು ಪ್ರತಿದಿನ ಸೇವಿಸುತ್ತ ಬನ್ನಿ. ಇದರಿಂದ ದೇಹದ ತಾಪಮಾನ ನಿಯಂತ್ರಣಕ್ಕೆ ಬರುತ್ತದೆ. ಮುಟ್ಟಿನ ಸಮಸ್ಯೆ: ಮಹಿಳೆಯನ್ನು ಕಾಡುವ ಬಹು ದೊಡ್ಡ ಸಮಸ್ಯೆ ಇದು. ನೋವು ನಿವಾರಕವಾಗಿ ಸೌತೆಕಾಯಿ ಕೆಲಸ ಮಾಡುತ್ತದೆ. ಮೊಸರು, ಇಂಗು, ಉಪ್ಪು, ಕಪ್ಪು ಮೆಣಸು, ಜೀರಿಗೆಯನ್ನು ಸೌತೆಕಾಯಿ ಜೊತೆ ಸೇರಿಸಿ ರಾಯ್ತಾ ಮಾಡಿ ಸೇವನೆ ಮಾಡುವುದರಿಂದ ಸ್ವಲ್ಪ ನೆಮ್ಮದಿ ಕಾಣಬಹುದು.