ಬೇಸಿಗೆ ಬಂತೆಂದರೆ ಸಾಕು ಜೋಗ ಜಲಪಾತ ತನ್ನ ವೈಭವ ಕಳೆದುಕೊಳ್ಳುತ್ತಿತ್ತು. ಮಳೆಗಾಲದಲ್ಲಿ ಬೋರ್ಗರೆಯುವ ಜಲಪಾತಕ್ಕೆ ದೊಡ್ಡ ಮಟ್ಟದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರಲ್ಲದೆ ಮಾರ್ಚ್ ನಂತರ ಬೇಸಿಗೆ ಶುರುವಾದ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ.
ಆದರೆ ಈ ಬಾರಿ ಬಿರು ಬಿಸಿಲಿನಲ್ಲೂ ಅಲ್ಪ ಪ್ರಮಾಣದಲ್ಲಿ ಜಲಪಾತದಿಂದ ನೀರು ಧಮ್ಮುಕ್ಕುತ್ತಿದ್ದು, ಕಡಿಮೆ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನೀರು ಬೀಳಲು ಕಾರ್ಗಲ್ ಜಲಾಶಯದ ಕ್ರಸ್ಟ್ ಗೇಟ್ ಗಳ ಅಡಿಯಿಂದ ಸೋರಿಕೆಯಾಗುವ ನೀರು ತಡೆಗಟ್ಟಲು ಕ್ರಮ ಕೈಗೊಳ್ಳದಿರುವುದೇ ಕಾರಣ ಎಂದು ಹೇಳಲಾಗಿದೆ.
ಈ ಬಾರಿ ಕಾರ್ಗಲ್ ಮಾರಿಕಾಂಬಾ ಜಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಮನವಿ ಮೇರೆಗೆ ಕ್ರಸ್ಟ್ ಗೇಟ್ ಗಳ ಅಡಿಯಿಂದ ಸಣ್ಣಗೆ ಸೋರಿಕೆಯಾಗುವ ನೀರನ್ನು ತಡೆಯಲಾಗಿಲ್ಲ ಎಂದು ಹೇಳಲಾಗಿದ್ದು, ಇದರಿಂದ ಬಿರು ಬಿಸಿಲಿನಿಂದ ತತ್ತರಿಸಿರುವ ಪ್ರಾಣಿ, ಪಕ್ಷಿಗಳು, ಜಲಚರಗಳಿಗೂ ಅನುಕೂಲವಾಗಿದೆ.