
ಬೇಸಿಗೆಯಲ್ಲಿ ಮೈ ಬೆವರುವ ಕಾರಣಕ್ಕೆ ದುರ್ಗಂಧ ಸೂಸುವುದು ಸಾಮಾನ್ಯ ಸಮಸ್ಯೆ. ಇದು ನಮಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೂ ಕಿರಿಕಿರಿ ಮಾಡುತ್ತದೆ. ಸ್ನಾನ ಮಾಡಿದರೂ ದುರ್ಗಂಧ ಕಡಿಮೆಯಾಗುವುದಿಲ್ಲ. ಅಂಥವರಿಗಾಗಿ ಇಲ್ಲಿದೆ ಒಂದಷ್ಟು ಟಿಪ್ಸ್. ಡಿಯೋಡ್ರೆಂಟ್ ದೇಹದ ದುರ್ಗಂಧವನ್ನು ಕಡಿಮೆ ಮಾಡುತ್ತದೆ.
ಕಂಕುಳಿನ ಭಾಗ ಮತ್ತು ತೊಡೆಯ ಮಧ್ಯ ಬ್ಯಾಕ್ಟೀರಿಯಾಗಳು ಹೆಚ್ಚು ಬೆಳವಣಿಗೆ ಹೊಂದುತ್ತವೆ. ಇವು ಬೆವರಿನ ಅಂಶವನ್ನು ಆಮ್ಲೀಯವಾಗಿ ಪರಿವರ್ತಿಸುತ್ತವೆ. ಇದರಿಂದ ಮೈ ವಾಸನೆ ಬರುತ್ತದೆ. ಅದಕ್ಕಾಗಿ ಈ ಭಾಗದ ಕೂದಲನ್ನು ತೆಗೆದು ಸೋಪಿನಿಂದ ಶುಚಿ ಮಾಡಿಕೊಳ್ಳಿ. ಹೈಡ್ರೋಜನ್ ಪೆರಾಕ್ಸೈಡ್ ಬಳಸಿಯೂ ದುರ್ಗಂಧ ಕಡಿಮೆ ಮಾಡಬಹುದು.
ಮನೆಯಲ್ಲಿದ್ದಾಗ ಅಗಾಗ್ಗೆ ಬಟ್ಟೆ ಬದಲಾಯಿಸುತ್ತಿರಿ. ವ್ಯಾಯಾಮ ಮಾಡಿದ ನಂತರ, ಬಿಸಿಲಿನಿಂದ ಹಿಂದಿರುಗಿದ ತಕ್ಷಣ ಸ್ನಾನ ಮಾಡಿ ಇಲ್ಲವೇ ಬಟ್ಟೆ ಬದಲಾಯಿಸಿ.
ಸಾಧ್ಯವಾದಷ್ಟು ಬೆಳ್ಳುಳ್ಳಿ, ಈರುಳ್ಳಿ ಸೇವನೆಯಿಂದ ದೂರವಿರಿ. ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಕಡಿಮೆ ಸೇವಿಸಿ. ತೆಳುವಾದ ಕಾಟನ್ ಬಟ್ಟೆಗಳನ್ನೇ ಧರಿಸಿ. ಈ ಮೂಲಕ ನಿಮ್ಮ ದೇಹದ ದುರ್ಗಂಧದ ಸಮಸ್ಯೆಯಿಂದ ನೀವು ದೂರವಿರಬಹುದು.