ಬೇಸಿಗೆ ಬಂದೇ ಬಿಟ್ಟಿದೆ. ಬೇಸಿಗೆಯಲ್ಲಿ ಬೆವರು ಗುಳ್ಳೆಗಳಿಂದ ಸಾಮಾನ್ಯವಾಗಿ ಎಲ್ಲರೂ ಕಿರಿಕಿರಿ ಅನುಭವಿಸ್ತಾರೆ. ಅದರಲ್ಲೂ ಮಕ್ಕಳಲ್ಲಿ ಈ ಸಮಸ್ಯೆ ಅಧಿಕ. ಹಾಗಾಗಿ ಸ್ನಾನದ ನಂತರ ಮಕ್ಕಳಿಗೆ ಪೌಡರ್ ಹಚ್ಚಲು ಮರೆಯಬೇಡಿ. ಆದಷ್ಟು ಸಡಿಲವಾದ ಉಡುಪುಗಳನ್ನೇ ತೊಡಿಸಿ.
ಮಕ್ಕಳು ಮಾತ್ರವಲ್ಲ ಉಳಿದವರು ಕೂಡ ಬೇಸಿಗೆಯಲ್ಲಿ ತುಂಬಾ ಬಿಗಿಯಾದ ಉಡುಪುಗಳನ್ನು ಧರಿಸಬಾರದು. ನೈಲಾನ್ ಮತ್ತು ರೇಯಾನ್ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ತೊಟ್ಟುಕೊಳ್ಳಬೇಡಿ. ಆದಷ್ಟು ಸಡಿಲವಾದ ಕಾಟನ್ ಮತ್ತು ಲೆನಿನ್ ಬಟ್ಟೆಗಳನ್ನೇ ಹಾಕಿಕೊಳ್ಳುವುದು ಉತ್ತಮ.
ಪ್ರತಿಬಾರಿ ಬೇಸಿಗೆಯಲ್ಲೂ ನಿಮಗೆ ಬೆವರುಗುಳ್ಳೆಗಳು ಕಾಣಿಸಿಕೊಂಡಲ್ಲಿ ಶ್ರೀಗಂಧದ ಪ್ಯಾಕ್ ಹಾಕಿಕೊಳ್ಳಿ. ರಾತ್ರಿ ಮಲಗುವ ಮುನ್ನ ಬೆವರು ಗುಳ್ಳೆಗಳು ಆಗಿರುವ ಸ್ಥಳದಲ್ಲೆಲ್ಲಾ ಶ್ರೀಗಂಧವನ್ನು ಲೇಪಿಸಿ. ಶ್ರೀಗಂಧ ದೇಹವನ್ನು ತಂಪಾಗಿಡುತ್ತದೆ, ಇದರಿಂದ ಬೆವರು ಗುಳ್ಳೆಗಳು ಕೂಡ ಮಾಯವಾಗುತ್ತವೆ.
ಬೆಳಗ್ಗೆ ಎದ್ದ ತಕ್ಷಣ 2 ಚಮಚ ಅಲೋವೆರಾ ಜ್ಯೂಸ್ ಗೆ 8-10 ಹನಿ ನಿಂಬೆ ರಸ ಹಾಗೂ ಒಂದು ಲೋಟ ತಂಪಾದ ನೀರನ್ನು ಬೆರೆಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಬಿಸಿಲಿನಲ್ಲಿ ಹೊರಗಡೆ ಹೋದ್ರೂ ನಿಮಗೆ ಬೆವರು ಗುಳ್ಳೆಗಳೇಳುವುದಿಲ್ಲ.
ಗುಲ್ಕನ್ ಸೇವನೆಯಿಂದ ಕೂಡ ಬೆವರುಸಾಲೆ ಕಡಿಮೆಯಾಗುತ್ತದೆ. ಗುಲ್ಕನ್ ಅನ್ನು ಗುಲಾಬ್ ಜೆಲ್ ಜೊತೆ ಬೆರೆಸಿ ದೇಹಕ್ಕೆ ಸ್ಪ್ರೇ ಮಾಡಿಕೊಳ್ಳಿ. ನಿಯಮಿತವಾಗಿ ಈರುಳ್ಳಿ ತಿನ್ನುವುದರಿಂದಲೂ ಬೆವರು ಗುಳ್ಳೆ ನಿಯಂತ್ರಣಕ್ಕೆ ಬರುತ್ತದೆ. ಬೇಸಿಗೆಯಲ್ಲಿ ವ್ಯಾಸಲೀನ್ ಅಥವಾ ಯಾವುದೇ ಹೆವಿಯಾದ ಕ್ರೀಮ್ ಹಚ್ಚುವುದರಿಂದ ಸೆಖೆ ಗುಳ್ಳೆಗಳು ಜಾಸ್ತಿಯಾಗುತ್ತವೆ.