ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಬಿಸಿಲಿಗೆ ಹೋದರಂತೂ ಚರ್ಮವು ಒಣಗಿದಂತಾಗಿ ಕಾಂತಿಯನ್ನೇ ಕಳೆದುಕೊಳ್ಳುತ್ತದೆ. ಪುರುಷರು ಕೂಡ ಬೇಸಿಗೆಯಲ್ಲಿ ತಮ್ಮ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಬೇಸಿಗೆಯಲ್ಲಿ ದಿನಕ್ಕೆರಡು ಬಾರಿ ಮುಖ ತೊಳೆದುಕೊಳ್ಳಿ. ಪುರುಷರ ಚರ್ಮವು ಹೆಚ್ಚು ಎಣ್ಣೆಯುಕ್ತವಾಗಿರುತ್ತದೆ. ಹಾಗಾಗಿ ಎರಡು ಬಾರಿ ಮುಖವನ್ನು ಸ್ವಚ್ಛಗೊಳಿಸುವುದು ಒಳ್ಳೆಯದು. ಮುಖವನ್ನು ಸರಿಯಾಗಿ ತೊಳೆಯುವುದರಿಂದ ರಂಧ್ರಗಳಲ್ಲಿರುವ ಕೊಳೆಯನ್ನು ನಿವಾರಿಸಬಹುದು. ಚರ್ಮದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಎಣ್ಣೆಯನ್ನೂ ಹೋಗಲಾಡಿಸಬಹುದು.
ಪುರುಷರ ಚರ್ಮವು ಮಹಿಳೆಯರಿಗಿಂತ ಹೆಚ್ಚು ಬಿಗಿಯಾಗಿರುತ್ತದೆ ಮತ್ತು ದಪ್ಪವಾಗಿರುತ್ತದೆ. ಹಾಗಾಗಿ ಮುಖವನ್ನು ಸ್ವಚ್ಛಗೊಳಿಸಲು ಉತ್ತಮ ಟೋನರ್ ಬಳಸಬೇಕು. ಉತ್ತಮ ಟೋನರ್ ಬಳಸುವುದರಿಂದ ನಿಮ್ಮ ಚರ್ಮದ ರಂಧ್ರಗಳನ್ನು ಸ್ವಚ್ಛವಾಗಿಡಬಹುದು. ಬೇಸಿಗೆಯಲ್ಲಿ ಮುಖದ ನೈಸರ್ಗಿಕ ಸ್ಕ್ರಬ್ಬಿಂಗ್ ಬಹಳ ಮುಖ್ಯ. ಸ್ಕ್ರಬ್ ಮಾಡುವುದರಿಂದ ಸತ್ತ ಜೀವಕೋಶಗಳು ಹೊರಬರುತ್ತವೆ.
ಪುರುಷರು ಸಾಮಾನ್ಯವಾಗಿ ಪ್ರತಿ 3 ದಿನಗಳಿಗೊಮ್ಮೆ ಸ್ಕ್ರಬ್ ಮಾಡಬೇಕು. ಇದು ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡಬಲ್ಲದು. ಚರ್ಮ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಿ. ಬೇಸಿಗೆಯಲ್ಲಿ ಒಳ್ಳೆಯ ಮಾಯಿಶ್ಚರೈಸರ್ ಬಳಸುವುದು ಸೂಕ್ತ. ಇದು ಚರ್ಮದ ಮೇಲೆ ಸುಕ್ಕುಗಳು ಬರದಂತೆ ಕಾಪಾಡುತ್ತದೆ.
ಅನೇಕ ಪುರುಷರು ಬೇಸಿಗೆಯಲ್ಲಿ ಸನ್‌ಸ್ಕ್ರೀನ್ ಬಳಸುವುದಿಲ್ಲ. ಸನ್‌ಸ್ಕ್ರೀನ್ ಬಳಸದೇ ಇದ್ರೆ ಸನ್ ಬರ್ನ್ ಆಗುವ ಸಾಧ್ಯತೆ ಇರುತ್ತದೆ. ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲು ಬೇಸಿಗೆಯಲ್ಲಿ ಪ್ರತಿ 2 ಗಂಟೆಗಳಿಗೊಮ್ಮೆ ಸನ್ ಸ್ಕ್ರೀನ್ ಹಚ್ಚುವುದು ಒಳ್ಳೆಯದು.