ಬೇಸಿಗೆ ಧಗೆ ಬೆವರು ಮಾತ್ರವಲ್ಲ, ದೇಹದಲ್ಲಿನ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವ ಕೆಲವು ಪಾನೀಯಗಳನ್ನು ನಿಯಮಿತವಾಗಿ ಸೇವಿಸುವುದು ಒಳಿತು. ಹಾಗಾದರೆ ಬೇಸಿಗೆಯಲ್ಲಿ ಯಾವೆಲ್ಲಾ ಹಣ್ಣು, ಜ್ಯೂಸ್ ಉಷ್ಣಾಂಶವನ್ನು ನಿಯಂತ್ರಿಸುತ್ತದೆ ನೋಡೋಣ ಬನ್ನಿ.
ಎಳನೀರು : ಬೇಸಿಗೆಯ ಓಯಸೀಸ್ ಅಂದ್ರೆ ಅದು ಎಳನೀರು, ಬಳಲಿ ಬೆಂಡಾಗಿರುವ ದೇಹಕ್ಕೆ ಎಳನೀರು ಚೈತನ್ಯ ನೀಡುವುದಲ್ಲದೇ ಶಕ್ತಿಯನ್ನು ಕೊಡುತ್ತದೆ. ಜೀರ್ಣಕ್ರಿಯೆಗೆ ಅಗತ್ಯವಾದ ನಾರಿನಂಶ ಇರುವುದರಿಂದ ಹೊಟ್ಟೆ ಆರೋಗ್ಯಕ್ಕೂ ಪರಿಣಾಮಕಾರಿ.
ತಾಟಿ ನಿಂಗು/ ಐಸ್ ಫ್ರೂಟ್ : ತಾಟಿ ನಿಂಗು ಅಥವಾ ಐಸ್ ಫ್ರೂಟ್ ಎಂದೇ ಖ್ಯಾತಿ ಗಳಿಸಿರುವ ಈ ಹಣ್ಣು ಬೇಸಿಗೆಯಲ್ಲಿ ರಸ್ತೆ ಬದಿಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ವಾರದಲ್ಲಿ ಒಂದೆರಡು ಬಾರಿ ಈ ಹಣ್ಣುಗಳನ್ನು ಸೇವಿಸುವುದರಿಂದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಬಹುದು.
ಕಾಮ ಕಸ್ತೂರಿ ಬೀಜ ಜ್ಯೂಸ್ : ಕಾಮ ಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಯಿಟ್ಟು ಆ ನಂತರ ಮಿಕ್ಸಿಯಲ್ಲಿ ಒಂದು ಸುತ್ತು ತಿರುವಿ ಕಲ್ಲು ಸಕ್ಕರೆ ಹಾಕಿಕೊಂಡು ಜ್ಯೂಸ್ ಕುಡಿಯಬಹುದು. ಇದು ಕೂಡ ಉಷ್ಣಾಂಶವನ್ನು ಸಮತೋಲನದಲ್ಲಿಡುತ್ತದೆ.
ಬಾರ್ಲಿ ನೀರು : ಒಂದು ಚಮಚ ಬಾರ್ಲಿಯನ್ನು ನೀರಿನಲ್ಲಿ ನೆನೆಯಿಟ್ಟು 3 ಗಂಟೆಗಳ ಬಳಿಕ ಚಿಟಿಕೆ ಉಪ್ಪು ಸೇರಿಸಿ ಸೇವಿಸಬಹುದು. ಇದು ಕೂಡ ದೇಹವನ್ನು ತಂಪಾಗಿಡುತ್ತದೆ.
ನಿಂಬೆ ಹಣ್ಣು : ನಿಂಬೆಹಣ್ಣಿನ ಬಗ್ಗೆ ನಮ್ಮ ಪೂರ್ವಿಕರು ಈಗಾಗಲೇ ಸಾಕಷ್ಟು ತಿಳಿಸಿ ಹೋಗಿದ್ದಾರೆ. ನಮ್ಮ ಅಡುಗೆ ಮನೆಯ ವೈದ್ಯನಂತೆ ನಿಂಬೆಹಣ್ಣು ನಮ್ಮ ಆರೋಗ್ಯಕ್ಕೆ ರಕ್ಷಾ ಕವಚವಾಗಿದೆ. ಉಪ್ಪಿನಕಾಯಿ ಖಾರದಿಂದ ಹೊಟ್ಟೆಯ ಉರಿ ತಣಿಸೋಕೆ ನಿಂಬೆಹಣ್ಣು ಬೇಕೇ ಬೇಕು. ಹಾಗೆಯೇ ದೇಹದ ಉಷ್ಣಾಂಶವನ್ನು ಕಾಪಾಡುವಲ್ಲಿ ನಿಂಬೆ ಪಾತ್ರ ಮಹತ್ವದ್ದು.