
ಕಿತ್ತಳೆ ಹಣ್ಣು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಅದೇ ರೀತಿ ಹಣ್ಣು ತಿಂದು ಸಿಪ್ಪೆಯನ್ನು ಬಿಸಾಡಬೇಕಿಲ್ಲ, ಕಿತ್ತಳೆ ಸಿಪ್ಪೆಯಲ್ಲೂ ಸಾಕಷ್ಟು ಔಷಧೀಯ ಗುಣಗಳಿವೆ. ಈ ಸಿಪ್ಪೆಗಳು ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಬಲ್ಲ ಸಾಮರ್ಥ್ಯ ಹೊಂದಿವೆ.
ಕಿತ್ತಳೆ ಸಿಪ್ಪೆಯಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂನಂತಹ ಪೋಷಕಾಂಶಗಳು ಕಂಡುಬರುತ್ತವೆ. ಕಿತ್ತಳೆ ಸಿಪ್ಪೆಯನ್ನು ಬಳಸುವುದರಿಂದ ಅನೇಕ ರೀತಿಯ ಚರ್ಮದ ಸಮಸ್ಯೆಗಳು ನಿವಾರಣೆಯಾಗುತ್ತವೆ. ನೀವು ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್ ಕೂಡ ಮಾಡಿಕೊಳ್ಳಬಹುದು. ಇದರಿಂದ ತ್ವಚೆಯ ಹೊಳಪು ಹೆಚ್ಚಾಗುತ್ತದೆ. ಕಿತ್ತಳೆ ಸಿಪ್ಪೆಯಲ್ಲಿ ಆ್ಯಂಟಿಒಕ್ಸಿಡೆಂಟ್‌ಗಳಿವೆ. ಕಿತ್ತಳೆ ಸಿಪ್ಪೆಯಿಂದ ಫೇಸ್ ಪ್ಯಾಕ್ ಮಾಡುವುದು ಹೇಗೆ? ಅದರ ಪ್ರಯೋಜನಗಳೇನು ಅನ್ನೋದನ್ನು ನೋಡೋಣ.
ಬೇಸಿಗೆಯಲ್ಲಿ ಟ್ಯಾನಿಂಗ್ ಸಮಸ್ಯೆ ಹೆಚ್ಚು. ಚರ್ಮ ಬಿಸಿಲಲ್ಲಿ ಸುಟ್ಟಂತಾಗಿ ಹೊಳಪೇ ಹೋಗಿಬಿಡುತ್ತದೆ. ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಯನ್ನು ತೆಗೆದುಕೊಳ್ಳಿ. ಅದಕ್ಕೆ 2 ಚಮಚ ಟೊಮೆಟೊ ರಸ ಸೇರಿಸಿ. ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಮುಖ, ಕುತ್ತಿಗೆ ಮತ್ತು ಕೈಗಳಿಗೆ ಹಚ್ಚಿಕೊಳ್ಳಿ. ಸುಮಾರು 10-15 ನಿಮಿಷಗಳ ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ನೀವು ಈ ಪ್ಯಾಕ್ ಅನ್ನು ವಾರಕ್ಕೆ 2-3 ಬಾರಿ ಟ್ರೈ ಮಾಡಬಹುದು.
ನಿಮ್ಮ ಸ್ಕಿನ್ ಆಯ್ಲಿಯಾಗಿದ್ದರೆ ಅವರಿಗೆ ಮೊಡವೆ ಸಮಸ್ಯೆ ಹೆಚ್ಚಾಗಿರುತ್ತದೆ. ಕಿತ್ತಳೆ ಸಿಪ್ಪೆಯ ಪುಡಿ ಬಳಸುವುದರಿಂದ ನಿಮ್ಮ ತ್ವಚೆಯಲ್ಲಿರುವ ಹೆಚ್ಚುವರಿ ಎಣ್ಣೆ ಅಂಶವನ್ನು ತೆಗೆದು ಹಾಕಬಹುದು. ಇದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ಇದಕ್ಕಾಗಿ 1 ಚಮಚ ಕಿತ್ತಳೆ ಸಿಪ್ಪೆಯ ಪುಡಿಗೆ ಸ್ವಲ್ಪ ಮೊಸರು ಮತ್ತು ರೋಸ್ ವಾಟರ್ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಹಚ್ಚಿಕೊಂಡು 15 ನಿಮಿಷಗಳ ಕಾಲ ಹಾಗೇ ಬಿಡಿ, ನಂತರ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಪರಿಣಾಮ ನಿಮಗೇ ಗೋಚರಿಸುತ್ತದೆ.
ಶುಷ್ಕ ತ್ವಚೆಗೆ ಹೊಳಪನ್ನು ತರಲು ಕಿತ್ತಳೆ ಸಿಪ್ಪೆಗಳನ್ನು ಬಳಸಲಾಗುತ್ತದೆ. ಮಾಲಿನ್ಯ ಮತ್ತು ವಯಸ್ಸಿನ ಕಾರಣಕ್ಕೆ ಚರ್ಮ ತನ್ನ ಹೊಳಪನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಇಂತಹ ನಿರ್ಜೀವ ಚರ್ಮವನ್ನು ಪೋಷಿಸಲು ಕಿತ್ತಳೆ ಸಿಪ್ಪೆಗಳನ್ನು ಬಳಸಿ. ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿ ಮತ್ತು 2 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ, ಅದು ಒಣಗಿದ ನಂತರ ತೊಳೆಯಿರಿ.
ನಿಮ್ಮ ಮೈಬಣ್ಣ ಎಷ್ಟೇ ಚೆನ್ನಾಗಿದ್ದರೂ ಕಲೆಗಳಿದ್ದರೆ ಅದು ಕೆಟ್ಟದಾಗಿ ಕಾಣುತ್ತದೆ. ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಕಡಲೆ ಹಿಟ್ಟು ಮತ್ತು ಸ್ವಲ್ಪ ನಿಂಬೆ ರಸವನ್ನು ಬೆರೆಸಿ. ಅದನ್ನು ಹಚ್ಚಿಕೊಂಡು 10 ನಿಮಿಷಗಳ ನಂತರ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕಲೆಗಳು ಮಾಯವಾಗುತ್ತದೆ.