ದಿನೇ ದಿನೇ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಬೆವರು ಹಾಗೂ ಇನ್ನಿತರ ಕಾರಣಗಳಿಂದ ದೇಹ ನಿರ್ಜಲೀಕರಣ ಆಗಬಹುದು. ಅದಕ್ಕೆ ಸಾಕಷ್ಟು ಪ್ರಮಾಣದಲ್ಲಿ ದ್ರವ ಆಹಾರವನ್ನು ತೆಗೆದುಕೊಳ್ಳುವುದು ಉತ್ತಮ. ಸಾಂಪ್ರದಾಯಿಕವಾದ ಉತ್ತಮ ದ್ರವ ಆಹಾರ ಅಂದರೆ ರಾಗಿ ಅಂಬಲಿ. ರಾಗಿ ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕಿರುಧಾನ್ಯ.
ರಾಗಿ ಅಂಬಲಿಯನ್ನು ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ.
ಒಂದು ಗ್ಲಾಸ್ ರಾಗಿ ಅಂಬಲಿಗೆ ಒಂದು ಚಮಚ ರಾಗಿ ಹಿಟ್ಟನ್ನು ಒಂದು ದೊಡ್ಡ ಗ್ಲಾಸ್ ನೀರಿನೊಂದಿಗೆ ಚೆನ್ನಾಗಿ ಕದಡಿ, ಗಂಟಿಲ್ಲದ ಹಾಗೆ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಚಿಟಿಕೆ ಉಪ್ಪು ಹಾಕಿ ಒಲೆಯ ಮೇಲೆ ಇಟ್ಟು, ಸಣ್ಣ ಉರಿಯಲ್ಲಿ ಕುದಿಯುವವರೆಗೂ ಚೆನ್ನಾಗಿ ಕೈ ಆಡಿಸುತ್ತಿರಿ. ಕೂಡಿ ಬಂದ ಮೇಲೆ ಕೆಳಗಿಳಿಸಿ.
ತಯಾರಾದ ರಾಗಿ ಅಂಬಲಿ ಚೆನ್ನಾಗಿ ತಣ್ಣಗಾದ ಮೇಲೆ ಮಜ್ಜಿಗೆ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು ಬೆರೆಸಿ ಕುಡಿದರೆ ಬಹಳ ರುಚಿಯಾಗಿ ಇರುತ್ತದೆ.