ಭಾರತದ ಹಲವು ನಗರಗಳಲ್ಲಿ ತಾಪಮಾನ 49 ಡಿಗ್ರಿ ದಾಟಿದೆ. ಸುಡು ಬಿಸಿಲಲ್ಲಿ ಜನ ಕಂಗಾಲಾಗಿದ್ದಾರೆ. ಬಿಸಿ ಗಾಳಿ, ವಿಪರೀತ ಸೆಖೆಯಿಂದಾಗಿ ಬೇಸಿಗೆಯಲ್ಲಿ ಅತಿಸಾರದ ಸಮಸ್ಯೆ ಹೆಚ್ಚು. ಬಹುತೇಕ ಎಲ್ಲರೂ ಬೇಸಿಗೆಯಲ್ಲಿ ವಾಂತಿ ಬೇಧಿಯಿಂದ ಬಳಲುತ್ತಾರೆ. ಇದಕ್ಕೆ ಸರಳವಾದ ಮನೆಮದ್ದಿದೆ.
ಬೇಸಿಗೆಯಲ್ಲಿ ನಾವು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹೊಟ್ಟೆಯನ್ನು ತಂಪಾಗಿಡುವಂತಹ ತಿನಿಸುಗಳನ್ನೇ ಸೇವಿಸಬೇಕು. ಬೇಸಿಗೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಬೇಧಿ ಸಮಸ್ಯೆಯಿಂದ ಪಾರಾಗಬಹುದು.
ಕೊತ್ತಂಬರಿ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್‌ಗಳ ಆಗರ ಇದು. ಕೊತ್ತಂಬರಿ ಸೊಪ್ಪಿನಲ್ಲಿ ಇರುವ ಆಮ್ಲಗಳು ಶಾಖದ ಹೊಡೆತ ಮತ್ತು ಅತಿಸಾರದ ಪರಿಣಾಮಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿವೆ. ಬೇಧಿ ಹೆಚ್ಚಾಗಿದ್ದರೆ ಒಣ ಕೊತ್ತಂಬರಿ ಬೀಜದ ಕಷಾಯ ಮಾಡಿಕೊಂಡು ಕುಡಿಯಿರಿ. ಇದು ಔಷಧದಂತೆ ಕೆಲಸ ಮಾಡುತ್ತದೆ, ದೇಹದಲ್ಲಿರುವ ವಿಷದ ಅಂಶವನ್ನು ಹೊರಹಾಕುತ್ತದೆ.
ಕೊತ್ತಂಬರಿ ಸೊಪ್ಪಿನ ಚಹಾ ಕೂಡ ಪರಿಣಾಮಕಾರಿ. ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುದಿಸಿ. ಅದನ್ನು ಸೋಸಿಕೊಂಡು ಕುಡಿಯಿರಿ. ಪ್ರತಿದಿನ ನೀವು ಮಾಡುವ ಮೇಲೋಗರಗಳಲ್ಲೂ ಕೊತ್ತಂಬರಿ ಸೊಪ್ಪನ್ನು ಬಳಸಿ. ಕೊತ್ತಂಬರಿ ಸೊಪ್ಪು ದೇಹವನ್ನು ತಂಪಾಗಿಡುತ್ತದೆ. ಇದನ್ನು ಮೊಸರಿನ ಜೊತೆ ಕೂಡ ಸೇವನೆ ಮಾಡಬಹುದು.