ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.ಈ ಸೀಸನ್‌ನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ವೈದ್ಯರ ಬಳಿಗೆ ಹೋಗಬೇಕಾದೀತು. ಕೆಲವೊಮ್ಮೆ ಮಾಹಿತಿಯ ಕೊರತೆಯಿಂದ ಬೇಸಿಗೆಗೆ ಸರಿಹೊಂದದ ಆಹಾರ ಮತ್ತು ಪಾನೀಯವನ್ನು ಸೇವಿಸುತ್ತೇವೆ. ಇದರಿಂದ ದೇಹಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಆಗ ನಾವು ಅನಾರೋಗ್ಯಕ್ಕೆ ಒಳಗಾಗುತ್ತೇವೆ.
ಬಹುತೇಕರಿಗೆ ಬೇಸಿಗೆಯಲ್ಲಿ ಡಿಹೈಡ್ರೇಶನ್ ಉಂಟಾಗುತ್ತದೆ. ಇದಕ್ಕೆ ಕಾರಣವಾಗಬಲ್ಲ ಕೆಲವೊಂದು ಪಾನೀಯಗಳಿಂದ ನೀವು ದೂರವಿರಬೇಕು. ಅವು ಯಾವುವು ಅನ್ನೋದನ್ನು ನೋಡೋಣ.
ಕಾಫಿ- ಬೇಸಿಗೆಯಲ್ಲಿ ಹೆಚ್ಚು ಕಾಫಿ ಕುಡಿದರೆ ಅದು ಆರೋಗ್ಯಕ್ಕೆ ಮಾರಕವಾಗುತ್ತದೆ. ಕಾಫಿಯಲ್ಲಿರುವ ಕೆಫೀನ್ ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಡಿಹೈಡ್ರೇಶನ್ ಉಂಟಾಗುತ್ತದೆ. ಒಂದು ವೇಳೆ ನೀವು ಕಾಫಿಗೆ ಅಡಿಕ್ಟ್ ಆಗಿದ್ದರೆ ದಿನಕ್ಕೆ ಎರಡು ಕಪ್‌ಗಳಿಗಿಂತ ಹೆಚ್ಚು ಕಾಫಿ ಕುಡಿಯಬೇಡಿ.
ಚಹಾ – ಬೇಸಿಗೆಯಲ್ಲಿ ಚಹಾವನ್ನು ಸಹ ತ್ಯಜಿಸಬೇಕು. ಇದು ದೇಹಕ್ಕೆ ಒಳ್ಳೆಯದಲ್ಲ. ಚಹಾದಲ್ಲೂ ಕೆಫೀನ್ ಇರುತ್ತದೆ. ಇದು ಕೂಡ ಡಿಹೈಡ್ರೇಶನ್‌ಗೆ ಕಾರಣವಾಗಬಹುದು. ಚಹಾವನ್ನು ಕುಡಿಯುವುದರಿಂದ ನೀವು ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತೀರಿ, ಇದರಿಂದ ಕೂಡ ನಿರ್ಜಲೀಕರಣವಾಗುತ್ತದೆ. ಚಹಾ ಮೂತ್ರವರ್ಧಕದಂತೆ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಪದೇ ಪದೇ ಮೂತ್ರವಿಸರ್ಜನೆಯ ಸಮಸ್ಯೆ ಬರಬಹುದು, ಈ ಮೂಲಕ ದೇಹದಿಂದ ನೀರನ್ನು ಕಳೆದುಕೊಳ್ಳಬಹುದು.
ಸೋಡಾ- ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿಕೊಳ್ಳಲು ಸೋಡಾ ಸೇವಿಸುವ ಅನೇಕ ಜನರಿದ್ದಾರೆ. ಆದರೆ ಇದು ನಿಮ್ಮ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಸೋಡಾ ನೀರಿನಲ್ಲಿ ಕಾರ್ಬನ್ ಮತ್ತು ಬಹಳಷ್ಟು ಫಾಸ್ಪರಿಕ್ ಆಮ್ಲವಿದೆ. ಇದು ಹೃದಯ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗಬಹುದು. ಇದನ್ನು ಪ್ರತಿದಿನ ಸೇವಿಸಿದರೆ ಆಸ್ಟಿಯೊಪೊರೋಸಿಸ್‌ನಂತಹ ಸಮಸ್ಯೆ ಎದುರಾಗಬಹುದು. ಹಲ್ಲು ಮತ್ತು ಒಸಡುಗಳಿಗೆ ಸಂಬಂಧಿಸಿದ ಸಮಸ್ಯೆಗಳೂ ಬರಬಹುದು.
ಬೇಸಿಗೆಯಲ್ಲಿ ಫಿಟ್ ಆಗಿರಲು ಈ ಪಾನೀಯಗಳನ್ನು ಸೇವಿಸಿ
ಬೇಸಿಗೆ ಕಾಲದಲ್ಲಿ ನಿಮ್ಮನ್ನು ಫಿಟ್ ಆಗಿ ಮತ್ತು ಆರೋಗ್ಯವಾಗಿಟ್ಟುಕೊಳ್ಳಲು ಬಯಸಿದರೆ ಎಳನೀರನ್ನು ಕುಡಿಯಿರಿ. ಇದು ತುಂಬಾ ಪ್ರಯೋಜನಕಾರಿ. ಎಳನೀರು ಶಕ್ತಿಯ ಅತ್ಯುತ್ತಮ ಮೂಲವಾಗಿದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದು ಆಯಾಸ ಮತ್ತು ಒತ್ತಡವನ್ನು ನಿವಾರಿಸುತ್ತದೆ. ಡಿಹೈಡ್ರೇಶನ್ ಅನ್ನು ತಡೆಯುತ್ತದೆ.
ಬೇಸಿಗೆಯಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಮಜ್ಜಿಗೆಯನ್ನು ಸೇವಿಸಬೇಕು. ಇದು ನಿಮ್ಮನ್ನು ಚೈತನ್ಯದಿಂದ ಇರುವಂತೆ ಮಾಡುತ್ತದೆ. ಮಜ್ಜಿಗೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಉದರ ಸಮಸ್ಯೆ ಕೂಡ ಇರುವುದಿಲ್ಲ. ಬೇಸಿಗೆಯಲ್ಲಿ ಫಿಟ್ ಆಗಿರಲು ಸೌತೆಕಾಯಿ ರಸವನ್ನು ಸಹ ಸೇವಿಸಬಹುದು. ಇದು ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ ಮತ್ತು ಸೌತೆಕಾಯಿಯು ತಂಪಾಗಿಸುವ ಪರಿಣಾಮವನ್ನು ಹೊಂದಿರುವುದರಿಂದ ದೇಹವೂ ತಂಪಾಗಿರುತ್ತದೆ.