ಬೇಸಿಗೆ, ಮಳೆಗಾಲ, ಚಳಿಗಾಲ ಯಾವುದೇ ಇರಲಿ ಎಳನೀರು ಸದಾಕಾಲ ನಿಮ್ಮ ದೇಹಕ್ಕೆ ಹಿತವಾಗಿಯೆ ಇರುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಹೈಡ್ರೇಟ್ ಆಗಿಟ್ಟುಕೊಳ್ಳಲು ಎಳನೀರು ಸೇವಿಸುವುದು ಉತ್ತಮ. ಬೇಸಿಗೆಯಲ್ಲಿ ಪ್ರತಿದಿನ ಎಳನೀರನ್ನು ಸೇವಿಸಬಹುದು.
ಎಳನೀರು ನಿಮ್ಮ ತೂಕವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಎಳನೀರು ಕುಡಿದ್ರೆ ನಿಮ್ಮ ಚರ್ಮದ ಹೊಳಪು ಹೆಚ್ಚಾಗುತ್ತದೆ. ರಕ್ತದೊತ್ತಡದ ಸಮಸ್ಯೆ ಇರುವ ರೋಗಿಗಳು ಎಳನೀರು ಕುಡಿಯಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಹಗಲಿನಲ್ಲಿ ಎಳನೀರನ್ನು ಸೇವಿಸಬಹುದು. ಬೇಸಿಗೆಯಲ್ಲಿ ಎಳನೀರು ಸೇವನೆ ನಿಮ್ಮನ್ನು ಚೈತನ್ಯಗೊಳಿಸುತ್ತದೆ.
ಎಳನೀರಿನಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ. ಇದು ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ಕೆಲವೊಂದು ಕಾಯಿಲೆಗೂ ಇದು ರಾಮಬಾಣ. ಎಳನೀರಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ ಹೀಗೆ ಅನೇಕ ರೀತಿಯ ಪೋಷಕಾಂಶಗಳು ಕಂಡುಬರುತ್ತವೆ.
ರೋಗ ನಿರೋಧಕ ಶಕ್ತಿಯನ್ನು ಇದು ಬಲಪಡಿಸುತ್ತದೆ. ಅಷ್ಟೇ ಅಲ್ಲ, ಎಳನೀರು ಜೀರ್ಣಾಂಗ ವ್ಯವಸ್ಥೆಯನ್ನು ಸದೃಢಗೊಳಿಸಲು ಕೂಡ ಸಹಕಾರಿಯಾಗಿದೆ. ಇದು ರಕ್ತದಿಂದ ಸುಲಭವಾಗಿ ಹೀರಲ್ಪಡುವ ಪೋಷಕಾಂಶಗಳನ್ನು ಹೊಂದಿರುತ್ತದೆ. ಫೈಬರ್ ಮತ್ತು ಮೆಗ್ನೀಸಿಯಮ್ ಎಳನೀರಿನಲ್ಲಿ ಕಂಡುಬರುತ್ತದೆ. ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆ ಇರುವವರು ಎಳನೀರು ಕುಡಿಯಬೇಕು.
ದೇಹವನ್ನು ಹೈಡ್ರೇಟ್ ಆಗಿಡುವ ಜೊತೆಗೆ ಚರ್ಮದ ಆರೋಗ್ಯಕ್ಕೂ ಎಳನೀರು ಬೇಕು. ಎಳನೀರು ಕುಡಿದ್ರೆ ಮುಖದ ಮೇಲಿನ ಮೊಡವೆ ಮತ್ತು ದದ್ದುಗಳು ನಿವಾರಣೆಯಾಗುತ್ತವೆ. ಇದರಲ್ಲಿ ವಿಟಮಿನ್ ಮತ್ತು ಆ್ಯಂಟಿಒಕ್ಸಿಡೆಂಟ್‌ಗಳು ಹೇರಳವಾಗಿ ಕಂಡುಬರುತ್ತವೆ.