ಬೇಸಿಗೆಯಲ್ಲಿ ಪದೇ ಪದೇ ಬಾಯಾರಿಕೆಯಾಗುತ್ತದೆ. ಸರಿಯಾಗಿ ಊಟ ಮಾಡುವುದು ಕೂಡ ಕಷ್ಟ. ಎಷ್ಟೇ ನೀರು ಕುಡಿದ್ರೂ ಬಾಯಾರಿಕೆ ನಿಲ್ಲೋದಿಲ್ಲ. ಅಷ್ಟೇ ಅಲ್ಲ ಬೇಸಿಗೆಯಲ್ಲಿ ಹೊಟ್ಟೆನೋವು, ವಾಂತಿ ಮತ್ತು ಅಜೀರ್ಣದಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಬಿರು ಬಿಸಿಲಿನಲ್ಲಿ ಮನೆಯಿಂದ ಹೊರಬಿದ್ದರೆ ಓಡಾಡೋದೂ ಕಷ್ಟ. ಹಾಗಾಗಿ ನಿಮ್ಮ ದೇಹ ಮತ್ತು ಹೊಟ್ಟೆಯನ್ನು ತಂಪಾಗಿಡಲು ಪ್ರಯತ್ನಿಸಬೇಕು. ನಿಮ್ಮ ಆಹಾರದಲ್ಲಿ ಆಯಾ ಕಾಲಕ್ಕೆ ಉಚಿತವಾದ ಹಣ್ಣು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ಈ 5 ತರಕಾರಿಗಳನ್ನು ಸೇವಿಸಬೇಕು.
ಸೌತೆಕಾಯಿ: ಸೌತೆಕಾಯಿಯಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ. ಇದರಿಂದ ಉದರ ಸಮಸ್ಯೆ ಆಗುವುದಿಲ್ಲ. ಬೇಸಿಗೆಯಲ್ಲಿ ನಿಮ್ಮನ್ನು ರಕ್ಷಿಸಬಲ್ಲ ಅನೇಕ ಪೋಷಕಾಂಶಗಳು ಸೌತೆಕಾಯಿಯಲ್ಲಿವೆ. ಸೌತೆಕಾಯಿಯಲ್ಲಿ ವಿಟಮಿನ್ ಕೆ ಮತ್ತು ಸಿ ಹೇರಳವಾಗಿದೆ. ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ನೀವು ಸೌತೆಕಾಯಿಯನ್ನು ಸಲಾಡ್‌ನಲ್ಲಿ ಸೇರಿಸಿಕೊಳ್ಳಿ. ಅಥವಾ ಮೇಲೋಗರಕ್ಕೂ ಬಳಸಬಹುದು.
ಸೋರೆಕಾಯಿ: ಇದು ಬೇಸಿಗೆಗೆ ಹೇಳಿ ಮಾಡಿಸಿದಂತಹ ತರಕಾರಿ. ನೀವು ಯಾವುದೇ ಋತುವಿನಲ್ಲಿ ಬೇಕಾದ್ರೂ ನೀವು ಸೋರೆಕಾಯಿಯನ್ನು ತಿನ್ನಬಹುದು. ಸೋರೆಕಾಯಿ ಪೋಷಕಾಂಶಗಳ ಖಜಾನೆ ಇದ್ದಂತೆ. ಸೋರೆಕಾಯಿಯಲ್ಲಿ ಕ್ಯಾಲ್ಸಿಯಂ ಇದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ. ಅಧಿಕ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಸೋರೆಕಾಯಿ ಬೇಸಿಗೆಯಲ್ಲಿ ಹೊಟ್ಟೆಯನ್ನು ತಂಪಾಗಿಡುತ್ತದೆ.
ಹಾಗಲಕಾಯಿ: ಹಾಗಲಕಾಯಿ ಕಹಿಯಾಗಿದ್ದರೂ ಆರೋಗ್ಯಕ್ಕೆ ಒಳ್ಳೆಯದು. ಹಾಗಲಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಇದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸದೃಢವಾಗಿರಿಸುತ್ತದೆ. ಹಾಗಲಕಾಯಿಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದು. ಹಾಗಲಕಾಯಿ ಕೂಡ ಬೇಸಿಗೆಗೆ ಸೂಕ್ತ.
ಬೀನ್ಸ್: ಬೇಸಿಗೆಯಲ್ಲಿ ನೀವು ಪ್ರೋಟೀನ್ ಸಮೃದ್ಧವಾಗಿರುವ ಬೀನ್ಸ್ ಅನ್ನು ತಿನ್ನಬೇಕು. ಬೀನ್ಸ್ ಅನ್ನು ಬೇಯಿಸಿ ತಿನ್ನಬಹುದು, ಅಥವಾ ಶಾಲೋ ಫ್ರೈ ಕೂಡ ಮಾಡಬಹುದು. ಸಲಾಡ್ ಜೊತೆ ಸೇರಿಸಿಕೊಂಡರೂ ರುಚಿಯಾಗಿರುತ್ತದೆ. ಬೀನ್ಸ್ ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿಯಾಗಿದ್ದು, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೀನ್ಸ್ನಲ್ಲಿ ಫೈಬರ್ ಅಂಶ ಸಮೃದ್ಧವಾಗಿದೆ. ಬೀನ್ಸ್ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿರುತ್ತದೆ. ಬೀನ್ಸ್‌ನಲ್ಲಿ ವಿಟಮಿನ್ ಕೆ, ಪ್ರೋಟೀನ್, ಕಬ್ಬಿಣ, ಸತು ಮತ್ತು ಉತ್ಕರ್ಷಣ ನಿರೋಧಕಗಳಿವೆ.
ಹಸಿರು ತರಕಾರಿ: ಬೇಸಿಗೆಯಲ್ಲಿ ನೀವು ಹೆಚ್ಚು ಹಸಿರು ತರಕಾರಿಗಳನ್ನು ಸೇವಿಸಬೇಕು. ಪಾಲಕ್, ಪುದೀನಾ ಮುಂತಾದ ತರಕಾರಿಗಳನ್ನು ಸೇವಿಸುವುದು ಉತ್ತಮ. ಇವುಗಳಿಂದ ಸೂಪ್, ದಾಲ್, ಪರೋಟ ಮಾಡಿ ತಿನ್ನಬಹುದು. ಸಲಾಡ್ ಜೊತೆಗೂ ಮಿಕ್ಸ್ ಮಾಡಬಹುದು. ಹಸಿರು ತರಕಾರಿಗಳಿಂದ ದೇಹಕ್ಕೆ ಕಬ್ಬಿಣದ ಅಂಶ ಸಿಗುತ್ತದೆ. ಅನೇಕ ಖನಿಜಗಳ ಕೊರತೆಯನ್ನು ಇವು ನೀಗಿಸುತ್ತವೆ. ಹಸಿರು ತರಕಾರಿಗಳಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಇವು ಬೇಸಿಗೆಯಲ್ಲಿ ಸಾಕಷ್ಟು ಪ್ರಯೋಜನಕಾರಿಯಾಗಿವೆ.