ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜನಸಾಮಾನ್ಯರಿಗೆ ದೊಡ್ಡ ಗಿಫ್ಟ್ ಕೊಟ್ಟಿದೆ. ಇಂಟರ್ನೆಟ್ ಇಲ್ಲದ ಬೇಸಿಕ್ ಫೋನ್ ಗಳಿಂದ್ಲೂ ಹಣ ಪಾವತಿ ಮಾಡಲು ಅವಕಾಶ ಕಲ್ಪಿಸಿದೆ. ಬೇಸಿಕ್ ಸೆಟ್ ಗಳಲ್ಲೂ ಯುಪಿಐ ಬಳಕೆಗೆ ಸಾಧ್ಯವಾಗುವಂಥಹ ಹೊಸ ಫೀಚರ್ ಅನ್ನು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಬಿಡುಗಡೆ ಮಾಡಿದ್ದಾರೆ.
ಬೇಸಿಕ್ ಫೋನ್ ಬಳಸ್ತಾ ಇರೋ 40 ಕೋಟಿ ಜನರು ಇದರ ಲಾಭ ಪಡೆಯಲಿದ್ದಾರೆ. ಈ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರಿಗೂ ಡಿಜಿಟಲ್ ಪಾವತಿಗೆ ಆರ್ ಬಿ ಐ ಅವಕಾಶ ಮಾಡಿಕೊಟ್ಟಿದೆ.
UPI123PAY ಅನ್ನೋದು ಈ ಹೊಸ ಸೇವೆಯ ಹೆಸರು. ಕೇವಲ ಮೂರು ಹಂತಗಳ ಪ್ರಕ್ರಿಯೆ ಇದು. ಕರೆ, ಆಯ್ಕೆ ಮತ್ತು ಪಾವತಿ. ಇದರ ಜೊತೆಗೆ 24 ಗಂಟೆ, ವಾರದ 7 ದಿನಗಳೂ ಹೆಲ್ಪ್ ಲೈನ್ ಸೇವೆ ಕೂಡ ದೊರೆಯಲಿದೆ.
ಹಣ ಪಾವತಿಸುವುದು ಹೇಗೆ ?
ಫೀಚರ್ ಫೋನ್ ನಲ್ಲಿ ಯುಪಿಐ ಸೌಲಭ್ಯ ಪಡೆಯಲು ಬಳಕೆದಾರರು ಮೊದಲು ತಮ್ಮ ಬ್ಯಾಂಕ್ ಖಾತೆಯನ್ನು ಬೇಸಿಕ್ ಫೋನ್ ಜೊತೆಗೆ ಲಿಂಕ್ ಮಾಡಬೇಕು. ಅದಾದ ಬಳಿಕ ಡೆಬಿಟ್ ಕಾರ್ಡ್ ಬಳಸಿ ಯುಪಿಐ ಪಿನ್ ಜನರೇಟ್ ಮಾಡಿಕೊಳ್ಳಬೇಕು. ಅದಾದ್ಮೇಲೆ ನೀವು ಹಣ ಪಾವತಿ ಮಾಡಬಹುದು.
ಫೀಚರ್ ಫೋನ್ ಬಳಕೆದಾರರು ಮೊದಲು IVR ಸಂಖ್ಯೆ 080-45163666ಗೆ ಕರೆ ಮಾಡಬೇಕು. ಇಲ್ಲಿ ನಿಮಗೆ ಹಣ ವರ್ಗಾವಣೆ, LPG ಗ್ಯಾಸ್ ರೀಫಿಲ್, FASTag ರೀಚಾರ್ಜ್, ಮೊಬೈಲ್ ರೀಚಾರ್ಜ್, EMI ಮರುಪಾವತಿ ಮತ್ತು ಬ್ಯಾಲೆನ್ಸ್ ಚೆಕ್ ಹೀಗೆ ಹಲವು ಆಯ್ಕೆಗಳು ಲಭ್ಯವಾಗುತ್ತವೆ. ಇವುಗಳಲ್ಲಿ ನೀವು ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ.
ಯಾರಿಗಾದರೂ ಹಣ ಪಾವತಿ ಮಾಡಬೇಕಿದ್ದಲ್ಲಿ ಅವರ ನಂಬರ್ ಆಯ್ಕೆ ಮಾಡಿಕೊಂಡು, ನಿಮ್ಮ ಮೊಬೈಲ್ ನಲ್ಲಿ ಹಣ ಮತ್ತು UPI ಪಿನ್ ನಮೂದಿಸಬೇಕು. ಆಗ ವಹಿವಾಟು ಪೂರ್ಣಗೊಳ್ಳುತ್ತದೆ. ಇದೇ ರೀತಿ ಅಂಗಡಿಗಳಿಗೆ ಕೂಡ ಹಣ ಪಾವತಿ ಮಾಡಬಹುದು.
ಅಕಸ್ಮಾತ್ ಹಣ ಪಾವತಿಯಾಗದೇ ಸಮಸ್ಯೆಯಾದಲ್ಲಿ ಅದಕ್ಕೂ ಆರ್ ಬಿ ಐ ಪರಿಹಾರ ಕಲ್ಪಿಸಿಕೊಟ್ಟಿದೆ. ಡಿಜಿಸಾಥಿ ಎಂಬ ಹೆಲ್ಪ್ ಲೈನ್ ತೆರೆದಿದೆ. ಬಳಕೆದಾರರು ಏನಾದರೂ ಸಮಸ್ಯೆ ಅಥವಾ ಪ್ರಶ್ನೆಗಳಿದ್ದಲ್ಲಿ www.Digisaathi.Info ಗೆ ವಿಸಿಟ್ ಮಾಡಿ ಅಥವಾ 14431 ಮತ್ತು 1800 8913333 ಗೆ ಕರೆ ಮಾಡಿ.