ಬೇಸರ ಅನ್ನೋದು ಪ್ರತಿಯೊಬ್ಬರಲ್ಲೂ ಸಹಜ. ಅದನ್ನು ಬದಿಗೊತ್ತಿ ಖುಷಿಯಾಗಿರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಆದ್ರೆ ಅದು ಸಾಧ್ಯವಾಗದೇ ಒದ್ದಾಡ್ತಾರೆ. ಬೇಸರವನ್ನು ಒದ್ದೋಡಿಸಲು ಸರಳವಾದ ಉಪಾಯವಿದೆ. ಬೇಸರದ ಭಾವನೆ ಮೂಡಿದಾಗ ಅದನ್ನು ದೂರ ತಳ್ಳಲು ಯತ್ನಿಸದೇ ಎದುರಿಸಬೇಕು ಎನ್ನುತ್ತಾರೆ ‘ಸಾಲ್ವ್ ಫಾರ್ ಹ್ಯಾಪಿ’ ಪುಸ್ತಕದ ಲೇಖಕ ಮೋ ಗವ್ದಾತ್.
ಹೊಟ್ಟೆ ನೋವು ಶುರುವಾದ್ರೆ ಬೆಳಗ್ಗೆಯಿಂದ ಏನೇನ್ ತಿಂದೆ ಅಂತಾ ನಾವು ನೆನಪು ಮಾಡಿಕೊಳ್ತೀವಿ. ಆದ್ರೆ ಅಸಂತೋಷಕ್ಕೆ ಕಾರಣ ಹುಡುಕೋದು ಸುಲಭವಿಲ್ಲ. ಬೇಸರಕ್ಕೆ ಕಾರಣ ಗೊತ್ತಾದ್ರೂ, ಪರಿಹಾರ ಏನು ಅಂತಾನೇ ತಿಳಿಯದೆ ಎಲ್ರೂ ಒದ್ದಾಡ್ತಾರೆ.
ಅಮೆರಿಕ, ಬ್ರೆಜಿಲ್ ಮತ್ತು ಚೀನಾದ 2300 ಕಾಲೇಜು ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ ಯಾರು ಜೀವನದಲ್ಲಿ ಹೆಚ್ಚು ತೃಪ್ತಿಯಿಂದಿದ್ದಾರೋ, ಕಡಿಮೆ ಖಿನ್ನತೆಯ ಲಕ್ಷಣಗಳನ್ನು ಹೊಂದಿದ್ದಾರೋ ಅವರು ತಮ್ಮ ಮನಸ್ಸಿನ ಭಾವನೆಗಳನ್ನು ಬಹು ಬೇಗ ಗುರುತಿಸಿದ್ದಾರೆ.
ಬೇಸರ, ಭಯ, ದುಃಖ, ಆತಂಕ, ನೋವು ಯಾವುದಾದ್ರೂ ಸರಿ ನಾವದನ್ನು ಒಪ್ಪಿಕೊಳ್ಳಬೇಕು, ಸ್ವಾಗತಿಸಬೇಕು. ಆಗ ಮಾತ್ರ ಖುಷಿಯಾಗಿ, ತೃಪ್ತಿಯಿಂದ ಇರಲು ಸಾಧ್ಯ. ಹಾಗಾಗಿ ಬೇಸರವಾದಾಗಲೆಲ್ಲ ಅದರಿಂದ ದೂರ ಓಡಬೇಡಿ.