ಕೊಪ್ಪಳ ಜಿಲ್ಲೆಯ ಬಿಜಕಲ್ ಗ್ರಾಮದಲ್ಲಿ ಬೇವಿನ ಮರವೊಂದರಲ್ಲಿ ಹಾಲು ಬರುತ್ತಿದ್ದು, ಜನರು ಮುಗಿಬಿದ್ದು ಪೂಜೆ ಸಲ್ಲಿಸುತ್ತಿದ್ದಾರೆ.
ಗ್ರಾಮದಲ್ಲಿನ ಗೋಪಾಲರಾವ್ ದೇಸಾಯಿ ಎಂಬುವವರ ಹೊಲದಲ್ಲಿದ್ದ ಬೇವಿನ ಮರವೊಂದರಿಂದ ಈ ರೀತಿ ಹಾಲು ಬರುತ್ತಿದೆ. ಹೊಲದಲ್ಲಿ ಬೃಹದಾಕಾರದ ಮರ ಬೆಳೆದು ನಿಂತಿತ್ತು. ಅದರಲ್ಲಿ ಕಳೆದ ಒಂದು ವಾರದಿಂದ ಹಾಲು ಜಿನುಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಸಾಗರೋಪಾದಿಯಲ್ಲ ಜನರು ಆ ಹೊಲಕ್ಕ ಆಗಮಿಸುತ್ತಿದ್ದಾರೆ. ಬಂದ ಜನರು ಇದು ದೇವರ ಪವಾಡ ಎಂದು ನಂಬಿ ಪೂಜೆ ಸಲ್ಲಿಸುತ್ತಿದ್ದಾರೆ.
ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೆಂಟ್ ಕೂಡ ಅಲ್ಲಿ ಹಾಕಲಾಗಿದೆ. ಮರದ ಕೆಳಗೆ ಕಲ್ಲುಗಳನ್ನು ಇಟ್ಟು ಗದ್ದಿ ದ್ಯಾಮಮ್ಮ ಎಂದು ಹೆಸರಿಟ್ಟು ಜನರು ಪೂಜೆ ಸಲ್ಲಿಸುತ್ತಿದ್ದಾರೆ.
ಅಲ್ಲದೇ, ಇದು ದೇವಿಯ ಪವಾಡ. ಇಲ್ಲಿ ಬಂದು ಪೂಜೆ ಸಲ್ಲಿಸುವುದರಿಂದ ಒಳ್ಳೆಯದಾಗುತ್ತದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇದನ್ನು ಕಾಣಲು ಬರುವ ಜನರಿಗಾಗಿ ಸ್ಥಳದಲ್ಲಿ ಅನ್ನ ಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿದೆ.
ಆದರೆ, ವೈಜ್ಞಾನಿಕವಾಗಿ ಬೇವಿನ ಮರದಲ್ಲಿ ಬಿಳಿ ದ್ರವ ಬರುವುದು ಸಹಜ ಕ್ರಿಯೆ. ಆದರೆ, ಜನರು ಮಾತ್ರ ಇದನ್ನು ವಿಸ್ಮಯ ಎನ್ನುತ್ತಿದ್ದಾರೆ.