ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಳೆಯಿಂದಾದ ಹಾನಿ ಕುರಿತು ಪರಿಶೀಲನೆ ನಡೆಸಲು ಮಡಿಕೇರಿಗೆ ತೆರಳಿದ್ದ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಪ್ರಕರಣ ನಡೆದಿತ್ತು. ಈ ಸಂಬಂಧ ಸಂಪತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಇದರ ಮಧ್ಯೆ ಆತ ಬಿಜೆಪಿ ಕಾರ್ಯಕರ್ತ ಎಂದು ಕಾಂಗ್ರೆಸ್ ಹೇಳುತ್ತಿದ್ದರೆ, ಸಂಪತ್ ನಿಮ್ಮದೇ ಪಕ್ಷದ ಕಾರ್ಯಕರ್ತ ಎಂದು ಬಿಜೆಪಿ ವಾದಿಸುತ್ತಿದೆ. ಈ ನಡುವೆ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲೂ ‘ಕೈ’ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದು ಈ ವೇಳೆ ಬೇಯಿಸಿದ ಮೊಟ್ಟೆಯನ್ನು ವಿತರಿಸಿದ್ದಾರೆ. ನಾಡಕಛೇರಿ ಮುಂದೆ ಸೋಮವಾರದಂದು ನೆರೆದಿದ್ದ ಪ್ರತಿಭಟನಾಕಾರರು, ಉತ್ತಮ ಆರೋಗ್ಯಕ್ಕೆ ಮೊಟ್ಟೆ ಸಹಕಾರಿಯಾಗಿದ್ದು ಇದು ತಿನ್ನುವ ವಸ್ತುವಾಗಿದೆ. ಇದನ್ನು ಎಸೆಯುವ ಮೂಲಕ ಬಿಜೆಪಿ – ಆರ್ ಎಸ್ ಎಸ್ ಕಾರ್ಯಕರ್ತರು ತಮ್ಮ ಸಂಸ್ಕೃತಿಯನ್ನು ಬಿಂಬಿಸಿದ್ದಾರೆ ಎಂದು ಆರೋಪಿಸಿದರು.
ಬಳಿಕ ಬೇಯಿಸಿದ ಮೊಟ್ಟೆಯನ್ನು ವಿತರಿಸಿದ್ದು, ಮನವಿ ಸ್ವೀಕರಿಸಲು ಬಂದ ಅಧಿಕಾರಿಗಳಿಗೂ ಮೊಟ್ಟೆ ನೀಡಲಾಯಿತು.