ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ದಿ ವಿನಾಯಕ ದೇವಸ್ಥಾನ ಬಲು ಪ್ರಸಿದ್ಧ. ವರಾಹಿ ನದಿಯ ತೀರದಲ್ಲಿ ಆಕರ್ಷಣೀಯವಾಗಿರುವ ಈ ದೇಗುಲ ಸಾವಿರಾರು ಭಕ್ತಾದಿಗಳ ನೆಚ್ಚಿನ ತಾಣ.
ಹಟ್ಟಿಯಂಗಡಿಯು ಆಳುಪ ರಾಜನ ಆಳ್ವಿಕೆ ಕಾಲದಲ್ಲಿ ತುಳುನಾಡ ರಾಜಧಾನಿಯಾಗಿತ್ತು. ವರಾಹಿ ನದಿಯ ತೀರದಲ್ಲಿ ಇರುವ ಅರಮನೆ ಹಾಡಿಯಲ್ಲಿ ಮೊದಲು ಆಳುಪ ರಾಜರ ಅರಮನೆ ಇತ್ತು. ಇದಲ್ಲದೆ, ಇಲ್ಲಿ ಜೈನ ಬಸದಿ, ಗೋಪಾಲಕೃಷ್ಣ, ಲೋಕನಾಥೇಶ್ವರ, ಮರಳದೇವಿ, ಶಂಕರನಾರಾಯಣ, ಶಿವಮುನೀಶ್ವರ, ಏಕನಾಥೇಶ್ವರ ಮತ್ತು ಶ್ಯಕ್ತರ ಬ್ರಹ್ಮ ದೇವಸ್ಥಾನಗಳು ಕೂಡ ನೋಡಲು ಸಿಗುತ್ತವೆ.
ಹಟ್ಟಿಯಂಗಡಿಯಲ್ಲಿರುವ ಶ್ರೀ ಸಿದ್ದಿ ವಿನಾಯಕ ದೇವಸ್ಥಾನ 8ನೇ ಶತಮಾನದಷ್ಟು ಹಳೆಯದು. ಈ ವಿನಾಯಕನ ಮೂರ್ತಿ ಹಿಂದೂಗಳಿಗೆ ಅತ್ಯಂತ ಪವಿತ್ರವಾದದ್ದಾಗಿದೆ. ಜಟೆಯನ್ನು ಹೊಂದಿರುವ ವಿನಾಯಕನ ಮೂರ್ತಿಯಿರುವುದು ಇಲ್ಲಿ ಮಾತ್ರ. ಮೂರ್ತಿಯು 2.5ಮೀಟರ್ ಎತ್ತರದ ಸಾಲಿಗ್ರಾಮದಿಂದ ಮಾಡಲಾಗಿದೆ. ದೇವರ ಮೂರ್ತಿಯು ಎಡಗಡೆಗೆ ವಾಲಿಕೊಂಡಿದೆ. ಕುಂದಾಪುರದಿಂದ ಇಲ್ಲಿಗೆ 14 ಕಿ.ಮೀ ದೂರವಿದ್ದು, ಖಾಸಗಿ ಸಾರಿಗೆ ವ್ಯವಸ್ಥೆ ಇದೆ.