ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಜರ್ಮನಿಯಲ್ಲಿ ಮಹಿಳೆಯೊಬ್ಬಳನ್ನು ತಪ್ಪಿತಸ್ಥಳೆಂದು ಪರಿಗಣಿಸಲಾಗಿದೆ. ಅರೆ ಇದೇನಿದು ಅಂತಾ ಹುಬ್ಬೇರಿಸಬೇಡಿ, ಮುಂದೆ ಓದಿ…..
ಮಹಿಳೆಯೊಬ್ಬಳು ತನ್ನ ಸಂಗಾತಿಯ ಕಾಂಡೋಮ್‌ಗಳಲ್ಲಿ ಅವನಿಗೆ ತಿಳಿಯದೆ ರಂಧ್ರ ಮಾಡಿದ್ದಾಳೆ. ಇದಕ್ಕಾಗಿ ಆಕೆಯನ್ನು ಅಲ್ಲಿನ ನ್ಯಾಯಾಲಯ ಲೈಂಗಿಕ ದೌರ್ಜನ್ಯದ ಅಪರಾಧಿ ಎಂದು ಪರಿಗಣಿಸಿದೆ. ಪಶ್ಚಿಮ ಜರ್ಮನಿಯ ಬೈಲೆಫೆಲ್ಡ್ ನಗರದಲ್ಲಿ ಈ ಘಟನೆ ನಡೆದಿದೆ.
ತನ್ನ ಸಂಗಾತಿಯ ಕಾಂಡೋಮ್‌ಗಳನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸಿದ್ದಕ್ಕಾಗಿ ಮಹಿಳೆಗೆ ಆರು ತಿಂಗಳ ಶಿಕ್ಷೆಯನ್ನು ನೀಡಲಾಗಿದೆ. ಆದರೆ, ಮಹಿಳೆಯ ಮೇಲೆ ಯಾವ ಆರೋಪ ಹೊರಿಸಬೇಕೆಂಬುದೇ ಅನಿಶ್ಚಿತವಾದ ಕಾರಣ, ತೀರ್ಪು ನೀಡುವುದು ನ್ಯಾಯಾಲಯಕ್ಕೆ ಸುಲಭವಾಗಿರಲಿಲ್ಲ.
ನ್ಯಾಯಾಧೀಶ ಆಸ್ಟ್ರಿಡ್ ಸಲೆವ್ಸ್ಕಿ ಅವರು ನಾವು ಇಂದು ಹೊಸ ಕಾನೂನು ಇತಿಹಾಸವನ್ನು ಬರೆದಿದ್ದೇವೆ ಎಂದು ಹೇಳಿದ್ದಾರೆ. ಆರಂಭದಲ್ಲಿ, ಮಹಿಳೆಯ ಮೇಲೆ ಅತ್ಯಾಚಾರದ ಆರೋಪ ಹೊರಿಸಲಾಯಿತು. ಆದರೆ, ನಂತರ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಯಿತು.
39 ವರ್ಷ ವಯಸ್ಸಿನ ಮಹಿಳೆಯು 42 ವರ್ಷದ ವ್ಯಕ್ತಿಯೊಂದಿಗೆ ಸಂಬಂಧವನ್ನು ಹೊಂದಿದ್ದರು. ಗರ್ಭಿಣಿಯಾಗುವ ಉದ್ದೇಶದಿಂದ ಅವಳು ತನ್ನ ಸಂಗಾತಿ ಇಟ್ಟುಕೊಂಡಿದ್ದ ಕಾಂಡೋಮ್‌ಗಳಲ್ಲಿ ರಹಸ್ಯವಾಗಿ ರಂಧ್ರಗಳನ್ನು ಹಾಕಿದ್ದಾಳೆ. ಬಳಿಕ ಮಹಿಳೆ ತಾನು ಗರ್ಭಿಣಿ ಎಂದು ನಂಬಿಸಿ ವ್ಯಕ್ತಿಗೆ ಸಂದೇಶ ಕಳುಹಿಸಿದ್ದಾಳೆ. ಸಂದೇಶದಲ್ಲಿ, ಅವಳು ಉದ್ದೇಶಪೂರ್ವಕವಾಗಿ ಅವನ ಕಾಂಡೋಮ್ಗಳನ್ನು ಹಾನಿಗೊಳಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಮಹಿಳೆ ಮಾಡಿರೋ ಕೆಲಸದಿಂದ ಬೇಸರಗೊಂಡ ವ್ಯಕ್ತಿ ಅವಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಿದ್ದು, ನಂತರ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತು.