ಮಾಹಿತಿ ತಂತ್ರಜ್ಞಾನ ಎಷ್ಟು ಅನುಕೂಲಕರವೋ ವಂಚಕರು ಅದನ್ನು ಅಷ್ಟೇ ಪ್ರಮಾಣದಲ್ಲಿ ದುರ್ಬಳಿಕೆ ಮಾಡಿಕೊಳ್ಳುತ್ತಾರೆ. ಮೊಬೈಲ್ ಗೆ ಕರೆ ಮಾಡುವ ಮೂಲಕ ವಂಚಕರು ಬ್ಯಾಂಕ್ ಓಟಿಪಿ ಪಡೆದು ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡ ಹಲವು ಪ್ರಕರಣಗಳು ಈ ಹಿಂದೆ ಬೆಳಕಿಗೆ ಬಂದಿದ್ದವು.
ಇದೀಗ ವಂಚನೆಯ ಮತ್ತೊಂದು ಮಜಲು ಬಹಿರಂಗವಾಗಿದ್ದು ಬೆಸ್ಕಾಂ ಗ್ರಾಹಕರು ಈಗ ವಂಚಕರ ಟಾರ್ಗೆಟ್ ಆಗಿದ್ದಾರೆ. ನಿಮ್ಮ ವಿದ್ಯುತ್ ಬಿಲ್ ಪಾವತಿ ಆಗದ ಕಾರಣ ಇಂದು ಮಧ್ಯರಾತ್ರಿಯಿಂದಲೇ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ಹೀಗಾಗಿ ತಕ್ಷಣವೇ ನಮ್ಮ ವಿದ್ಯುತ್ ಅಧಿಕಾರಿಯ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿದ್ಯುತ್ ಶುಲ್ಕ ಪಾವತಿಸಿ ಎಂಬ ಸಂದೇಶ ಬೆಸ್ಕಾಂ ಗ್ರಾಹಕರಿಗೆ ಬರುತ್ತಿದೆ.
ಈ ವಿಚಾರ ತಿಳಿದಿದ್ದಂತೆ ಬೆಸ್ಕಾಂ ಸಾರ್ವಜನಿಕರಿಗೆ ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ ಅಂತಹ ಫೋನ್ ನಂಬರ್ ಗಳಿಗೆ ಹಣ ಪಾವತಿಸಬೇಡಿ ಎಂದು ಹೇಳಿದೆ. ವಿದ್ಯುತ್ ಬಿಲ್ ಬಾಕಿ ಇದ್ದರೆ ಅಧಿಕೃತ ಕೇಂದ್ರಗಳಲ್ಲಿ ಮಾತ್ರ ಪಾವತಿಸಬೇಕು. ಅನಧಿಕೃತ ವ್ಯಕ್ತಿಗಳ ಕರೆ ಅಥವಾ ಸಂದೇಶ ಬಂದರೆ ಕೂಡಲೇ ಬೆಸ್ಕಾಂ ಸಹಾಯವಾಣಿಗೆ ದೂರು ನೀಡಬೇಕು ಎಂದು ತಿಳಿಸಲಾಗಿದೆ.