ಮುರಾದಾಬಾದ್ ಸಮೀಪವಿರುವ ದೆಹಲಿ – ಲಕ್ನೋ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 12 ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಪಂಜಾಬ್ ಹಾಗೂ ಪಿಲಿಬೀತ್ ನಡುವೆ ಸಂಚರಿಸುತ್ತಿದ್ದ ಬಸ್, ಟ್ರಕ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ದುರಂತದಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಅನ್ನೋದಕ್ಕೆ ಇನ್ನೂ ನಿಖರವಾದ ಮಾಹಿತಿ ತಿಳಿದುಬಂದಿಲ್ಲ. ಮುಂಜಾನೆ ಸುಮಾರು 6 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.
ಘಟನೆಯಲ್ಲಿ ಗಾಯಗೊಂಡವರನ್ನ ಮುರಾದಾಬಾದ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅನೇಕ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ ಬಸ್ನಲ್ಲಿ ಸುಮಾರು 50 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಡಿಸಿಎಂ ಟ್ರಕ್ನಲ್ಲಿ 20 ರಿಂದ 25 ಮಂದಿ ಜನರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮುರಾಬಾದ್ನ ಪಕವಾಡಾ ಠಾಣಾ ಪೊಲೀಸರು ಪರಿಶೀಲನೆ ಮುಂದುವರಿಸಿದ್ದಾರೆ.
ಟ್ರಕ್ನಲ್ಲಿ ಪ್ರಯಾಣ ಮಾಡುತ್ತಿದ್ದ ಬಲರಾಮ್ ಎಂಬಾತ ಘಟನೆಯ ಬಗ್ಗೆ ಮಾತನಾಡಿದ್ದು ಪೊಲೀಸರು ನಮ್ಮ ಚಾಲಕನಿಗೆ ಗಾಡಿ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ನಾವು ಟ್ರಕ್ನಲ್ಲಿ ಪ್ರಯಾಣ ಮಾಡುತ್ತಿದ್ದೆವು. ಟ್ರಕ್ ನಿಲ್ಲಿಸುತ್ತಿದ್ದಂತೆಯೇ ಹಿಂಬದಿಯಿಂದ ಬಸ್ ಬಂದು ಟ್ರಕ್ಗೆ ಗುದ್ದಿದೆ. ಈ ದುರ್ಘಟನೆಯಲ್ಲಿ ನಮ್ಮ ಆಪ್ತರಲ್ಲಿ ಮೂವರು ಸಾವಿಗೀಡಾಗಿದ್ದಾರೆ. ಮೃತರನ್ನ ಆಶಿಷ್, ಸುರೇಶ್ ಹಾಗೂ ನನ್ಹೆ ಎಂದು ಗುರುತಿಸಲಾಗಿದೆ. ಟ್ರಕ್ನಲ್ಲಿದ್ದ ಇನ್ನೂ 20 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ರು.
ಅಪಘಾತದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಎಸಿಪಿ ಅಮಿತ್ ಆನಂದ್, ಅಪಘಾತದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಐವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತಪಟ್ಟವರ ಸಂಖ್ಯೆ ಬಗ್ಗೆ ಅಧಿಕೃತ ಮಾಹಿತಿ ಈಗಲೇ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.