‘ಬೆಳೆ ವಿಮೆ’ ನೋಂದಣಿ ಕುರಿತಂತೆ ರೈತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. 2023 – 24 ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಮುಂಗಾರು ಹಂಗಾಮಿನ ಬೆಳೆ ವಿಮೆಗಾಗಿ ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಈ ಯೋಜನೆ ಅಡಿ ನೋಂದಾಯಿಸಬಹುದಾಗಿದ್ದು, ಮುಸುಕಿನ ಜೋಳ ಬೆಳೆಗೆ ಜುಲೈ 31 ಹಾಗೂ ಜೋಳ, ರಾಗಿ ಬೆಳೆಗಳಿಗೆ ಆಗಸ್ಟ್ 16 ಅಂತಿಮ ದಿನಾಂಕವಾಗಿದೆ.
ಬಿತ್ತನೆ ಮಾಡುವುದಕ್ಕಿಂತ ಮುಂಚಿತವಾಗಿ ನೋಂದಣಿ ಮಾಡಬೇಕಿದ್ದು, ಬೆಳೆ ಸಾಲ ಪಡೆಯುವ ರೈತರು ಕಡ್ಡಾಯವಾಗಿ ಈ ಯೋಜನೆಗೆ ಒಳಪಡಬೇಕಿದೆ. ಒಂದೊಮ್ಮೆ ಈ ಯೋಜನೆ ಪಡೆಯಲಿಚ್ಚಿಸದ ರೈತರು ಅಂತಿಮ ದಿನಕ್ಕೆ ಏಳು ದಿನಗಳ ಮೊದಲು ಲಿಖಿತ ಮುಚ್ಚಳಿಕೆ ನೀಡಿದ ಸಂದರ್ಭದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈ ಬಿಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೃಷಿ, ಕಂದಾಯ, ಸಹಕಾರ ಇಲಾಖೆ ಅಥವಾ ಸಮೀಪದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದ್ದು, ವೆಬ್ಸೈಟ್ http://samrkshane.karnataka.gov.in ಗೆ ಸಹ ಭೇಟಿ ನೀಡಬಹುದಾಗಿದೆ.